ಬೆಂಗಳೂರು: ಕಾವೇರಿ ನದಿ ನೀರು ವಿವಾದ ಕುರಿತು ಸುಪ್ರೀಂ ನೀಡಿರುವ ಆದೇಶದಂತೆ ನಡೆಯಲು ತೀರ್ಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹಿಂದಿದ್ದ ಸರ್ಕಾರಗಳೂ ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ತೀರ್ಮಾನವನ್ನು ಕೈಗೊಂಡಿತ್ತು ಎಂದು ಮಂಗಳವಾರ ಹೇಳಿದ್ದಾರೆ.
ಸರ್ವಪಕ್ಷ ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, 1995, 2002 ಮತ್ತು 2012-13ರ ಸುಪ್ರೀಂಕೋರ್ಟ್ ನಿರ್ದೇಶನದಂತೆಯೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಇದು ಮೊದಲೇನಲ್ಲ. ಈ ಹಿಂದಿದ್ದ ಸರ್ಕಾರಗಳು ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿತ್ತು ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ವಿರೋಧಕ್ಕೆ ತಿರುಗೇಟು ನೀಡಿದ್ದಾರೆ.
2012ರ ಜಗದೀಶ್ ಶೆಟ್ಟರ್ ಅವರ ಅಧಿಕಾರಾವಧಿಯಲ್ಲಿ 9 ದಿನಗಳಲ್ಲಿ 10 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿತ್ತು. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಬಿಜೆಪಿ ಸರ್ಕಾರ ಪ್ರತಿಪಕ್ಷಗಳನ್ನು ಸಂಪರ್ಕಿಸಿರಲಿಲ್ಲ ಎಂದು ಹೇಳಿದ್ದಾರೆ.
ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮುಂದುವರೆಸಲಾಗುತ್ತದೆ. ಈ ಬಗ್ಗೆ ಸುಪ್ರೀಂನಲ್ಲಿ ಇನ್ನೊಂದು ಅಥವಾ ಎರಡು ದಿನಗಳೊಳಗಾಗಿ ಸರ್ಕಾರ ಅರ್ಜಿ ಸಲ್ಲಿಸಲಿದೆ. ಆದೇಶದಿಂದಾಗಿ ಕರ್ನಾಟಕದಲ್ಲಿರುವ ರೈತರಿಗೆ ಹಾಗೂ ಬೆಂಗಳೂರಿನ ಜನತೆಗೆ ಸಾಕಷ್ಟು ಸಮಸ್ಯೆ ಎದುರಾಗಲಿದ್ದು, ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಬಳಿ ಮನವಿ ಮಾಡಿಕೊಳ್ಳಲಾಗುತ್ತದೆ.
ಮಾನ್ಸೂನ್ ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು ಈ ಬಗ್ಗೆ ಶೀಘ್ರದಲ್ಲಿಯೇ ಕಾವೇರಿ ಮೇಲ್ವಿಚಾರಣಾ ಸಮಿತಿಯನ್ನೂ ಕೂಡ ಸಂಪರ್ಕಿಸಲಾಗುತ್ತದೆ. ಬೆಳೆಗಳಿಗೆ ನೀರನ್ನು ಒದಗಿಸುವುದಾಗಿಯೂ ರೈತರಿಗೆ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ, ಪ್ರತಿಭಟನೆ ವೇಳೆ ಯಾವುದೇ ರೀತಿಯ ಹಿಂಸಾಚಾರಗಳನ್ನು ಸೃಷ್ಟಿಸದಂತೆ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.