ಬೆಂಗಳೂರು: ಕಾವೇರಿ ನಮ್ಮದು ಎಂದು ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ಬಾಯಿ ಹರಿದುಕೊಂಡು ಬಡಿದುಕೊಳ್ಳುತ್ತಿದ್ದರೆ, ಅತ್ತ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ಮಾತ್ರ ಕಾವೇರಿ ತಮಿಳುನಾಡಿನದ್ದು ಎಂದು ಪ್ರದರ್ಶನ ಮಾಡುತ್ತಿದೆ.
ರಕ್ತ ಕೊಟ್ಟೇವು ಆದ್ರೆ ಕಾವೇರಿ ಬಿಡೆವು ಅಂತ ಕನ್ನಡಿಗರು ಹೋರಾಡ್ತಿದ್ರೆ ಅತ್ತ ಗೂಗಲ್ ಸಂಸ್ಥೆ ಮಾತ್ರ ಕಾವೇರಿ ನದಿಯನ್ನು ತಮಿಳುನಾಡಿಗೆ ಸೇರಿಸಿದೆ. ತಾಂತ್ರಿಕ ತೊಂದರೆಯೋ ಅಥವಾ ಗೂಗಲ್ ಸಂಸ್ಥೆಯ ಸ್ಯಾಟಲೈಟ್ ಯಡವಟ್ಟೂ ಅಂತೂ ಪ್ರಸ್ತುತ ಕಾವೇರಿ ನದಿಯನ್ನು ತಮಿಳುನಾಡಿಗೆ ಸೇರಿಸಲಾಗಿದೆ. ಗೂಗಲ್ ಆರ್ಥ್ ನಲ್ಲಿ ಕಾವೇರಿ ನದಿ ಎಂದು ಟೈಪಿಸಿದರೆ, ನದಿಯ ಲ್ಯಾಂಡ್ ಮಾರ್ಕ್ ತಮಿಳುನಾಡಿನಲ್ಲಿ ಇರುವಂತೆ ತೋರಿಸುತ್ತಿದೆ.
ಈ ಹಿಂದೆಯೂ ಕೂಡ ಭಾರತದ ಅರುಣಾಚಲ ಪ್ರದೇಶವನ್ನು ಚೀನಾಕ್ಕೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗೂಗಲ್ ಗುರಿಯಾಗಿದ್ದ ಗೂಗಲ್ ಬಳಿಕ ತನ್ನ ತಪ್ಪನ್ನು ತಿದ್ದಿಕೊಂಡಿತ್ತು. ಇದೀಗ ಕರ್ನಾಟಕದ ಜೀವನದಿ ಕಾವೇರಿಯನ್ನು ತಮಿಳುನಾಡಿಗೆ ಸೇರಿಸುವ ಮೂಲಕ ಗೂಗಲ್ ಇದೀಗ ಕನ್ನಡಿಗರ ವಿರೋಧ ಕಟ್ಟಿಕೊಂಡಿದೆ. ಗೂಗಲ್ ನ ಈ ಯಡವಟ್ಟು ಪ್ರಸ್ತುತ ಕರ್ನಾಟಕದ ಪರಿಸ್ಥಿತಿಯನ್ನು ಬಿಂಬಿಸುವಂತಿದ್ದು, ನಮ್ಮ ನೆಲದಲ್ಲಿ ಹುಟ್ಟುವ ಕಾವೇರಿಗಾಗಿ ನಾವೇ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.