ಬೆಂಗಳೂರು: ಕಾವೇರಿ ನದಿ ಸಂಕಷ್ಟದಲ್ಲಿದೆ. ಅದು ಕೇವಲ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನಡೆಯುತ್ತಿರುವ ಜಲ ವಿವಾದದಿಂದ ಮಾತ್ರವಲ್ಲ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ ಎಂದು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ) ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಪ್ರತಿ ವರ್ಷ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಎಷ್ಟೆಂದರೆ ಪ್ರತಿವರ್ಷ ಸುರಿಯುತ್ತಿರುವ ಸರಾಸರಿ ಮಳೆಯ ಪ್ರಮಾಣಕ್ಕಿಂತ ಕಡಿಮೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಭೌಗೋಳಿಕ ಪರಿಹಾರ ಕಂಡುಹಿಡಿಯಬೇಕೆಂದು ವಿಜ್ಞಾನಿಗಳು ಹೇಳುತ್ತಾರೆ.
ಐಐಎಸ್ ಸಿಯ ಗದ್ದೆ ಮತ್ತು ಇಂಧನ ಸಂಶೋಧನಾ ಗುಂಪಿನ ಮುಖ್ಯಸ್ಥ ಪ್ರೊ.ಟಿ.ವಿ.ರಾಮಚಂದ್ರ ಅವರು ಹೇಳುವ ಪ್ರಕಾರ, ಕೊಡಗು ಜಿಲ್ಲೆಯ ಲಕ್ಷ್ಮಣತೀರ್ಥ ನದಿಯ ಜಲಾನಯನ ಪ್ರದೇಶದಲ್ಲಿ ನಡೆಸಿರುವ ಅಧ್ಯಯನದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಿರುವ 50 ಟಿಎಂಸಿ ನೀರಿಗೆ ಬದಲಾಗಿ ಜಲಾನಯನ ಪ್ರದೇಶಗಳ ನಾಶವನ್ನು ತಪ್ಪಿಸಿದರೆ ಇನ್ನಷ್ಟು ನೀರು ಸಂಗ್ರಹವಾಗಬಹುದು ಎನ್ನುತ್ತಾರೆ.
ಕಾವೇರಿ ಜಲಾನಯನ ಪ್ರದೇಶಗಳ ಭೂಮಿ ಬಳಕೆಯಲ್ಲಿ ಬದಲಾವಣೆಯಾಗುತ್ತಿರುವುದು ದುಷ್ಪರಿಣಾಮ ಬೀರುತ್ತಿದೆ. ಇದು ಖಾನಾಪುರ ಅರಣ್ಯ ನಾಶದಿಂದ ಮಲಪ್ರಭ ನದಿ, ಶಿವಮೊಗ್ಗ ಸುತ್ತಮುತ್ತ ಪರಿಸರ ನಾಶದಿಂದ ಶರಾವತಿ ನದಿ ನೀರು ಮತ್ತು ಕೊಡಗು ಜಿಲ್ಲೆಯಲ್ಲಿನ ಅರಣ್ಯ ನಾಶದಿಂದ ಕಾವೇರಿ ನದಿ ನೀರಿನ ಮೇಲೆ ದುಷ್ಪರಿಣಾಮ ಬೀರಿದೆ ಎನ್ನುತ್ತಾರೆ ರಾಮಚಂದ್ರ.
ಜಲಾನಯನ ಪ್ರದೇಶಗಳಲ್ಲಿನ ಭೂ ಬಳಕೆ ನದಿ, ಕೊಳ್ಳಗಳಿಗೆ ನೀರಿನ ಹರಿಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತಿಯಾದ ಕೃಷಿ ಚಟುವಟಿಕೆಗಳಿಂದಾಗಿ ನೀರಿನ ಮಟ್ಟ ಕುಸಿಯುತ್ತಿದೆ. ನಗರ ಪ್ರದೇಶದ ಜನರು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅವಶ್ಯಕತೆಯಿದೆ.
ಬೆಂಗಳೂರು ನಗರಕ್ಕೆ ಪ್ರತಿವರ್ಷ ಸುಮಾರು 18 ಟಿಎಂಸಿ ಕಾವೇರಿ ನೀರು ಬೇಕಾಗಿದೆ. ಇಲ್ಲಿ ಸುಮಾರು 15 ಟಿಎಂಸಿಯಷ್ಟು ಮಳೆ ಬೀಳುತ್ತದೆ. ಹೀಗಿರುವಾಗ ಕೇವಲ ಕಾವೇರಿ ನೀರನ್ನು ದಿನಬಳಕೆ ಮತ್ತು ಕುಡಿಯಲು ಅವಲಂಬಿಸದೆ ಸ್ಥಳೀಯ ಸಂಪನ್ಮೂಲವನ್ನು ಏಕೆ ಬಳಸಿಕೊಳ್ಳಬಾರದು ಎಂದು ಅವರು ಪ್ರಶ್ನಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics