ಸಾಂದರ್ಭಿಕ ಚಿತ್ರ 
ರಾಜ್ಯ

ಕಾವೇರಿ ವಿವಾದ: ಕರ್ನಾಟಕದ ಕಾನೂನು ತಂಡ ಎಡವಿದ್ದೆಲ್ಲಿ?

ತೀವ್ರ ಬರಗಾಲ ಸಂದರ್ಭದಲ್ಲಿಯೂ ಕೂಡ ಕಾವೇರಿ ನೀರು ವಿಚಾರದಲ್ಲಿ ರಾಜ್ಯದ ಜನರ ಹಿತ ಕಾಪಾಡುವಲ್ಲಿ...

ಬೆಂಗಳೂರು: ತೀವ್ರ ಬರಗಾಲ ಸಂದರ್ಭದಲ್ಲಿಯೂ ಕೂಡ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಜನರ ಹಿತ ಕಾಪಾಡುವಲ್ಲಿ ಕರ್ನಾಟಕದ ಕಾನೂನು ತಂಡ ವಿಫಲವಾಗಿದೆ. ಇಂತಹ ಅಭಿಪ್ರಾಯ ನಮ್ಮ ಕಾನೂನು ತಜ್ಞರು ಸೇರಿದಂತೆ ಜನಸಾಮಾನ್ಯರದ್ದು. ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಕೂಡ ಇಂತಹದ್ದೇ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡುವ ಕಾನೂನು ತಂಡವನ್ನು ಬದಲಾಯಿಸಬೇಕು ಎಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ. ಕಳೆದ ಅನೇಕ ದಶಕಗಳಿಂದ ಈಗ ಇರುವ ತಂಡ ಕಾವೇರಿ ನೀರು ಹಂಚಿಕೆ ಕೇಸಿನಲ್ಲಿ ಸೋಲುತ್ತಾ ಬಂದಿರುವುದು ಇದಕ್ಕೆ ಕಾರಣ.
ಪ್ರಸ್ತುತ ಕರ್ನಾಟಕದ ಕಾನೂನು ತಂಡದಲ್ಲಿ ಮೂವರು ಹಿರಿಯ ವಕೀಲರಾದ (80ರಿಂದ 89 ವರ್ಷ ಒಳಗಿನ) ಎಫ್.ಎಸ್.ನಾರಿಮನ್, ಅನಿಲ್ ಬಿ ದಿವಾನ್ ಮತ್ತು ಎಸ್.ಎಸ್.ಜವಲಿ ಇದ್ದಾರೆ. ಅವರೊಟ್ಟಿಗೆ ಅಡ್ವೊಕೇಟ್ ಜನರಲ್ ಎಂ.ಆರ್.ನಾಯ್ಕ್, ಮೋಹನ್ ವಿ ಕಟರ್ಕಿ, ಎಸ್.ಸಿ.ಶರ್ಮ, ಆರ್.ಎಸ್.ರವಿ, ಜೆ.ಎಂ.ಗಂಗಾಧರ್, ರಣವೀರ್ ಸಿಂಗ್ ಮತ್ತು ವಿ.ಎನ್.ರಘುಪತಿ ಮೊದಲಾದ ಅಡ್ವೊಕೇಟ್ ಗಳಿದ್ದಾರೆ.
ವಕೀಲರು ಹೇಳುವ ಪ್ರಕಾರ, ಅನೇಕ ದಶಕಗಳಿಂದ ಹಲವು ಸರ್ಕಾರಗಳು ಬಂದು ಹೋದರೂ,  ತಮಿಳು ನಾಡು ಜೊತೆ ಕಾನೂನು ಹೋರಾಟದಲ್ಲಿ ಸೋಲುತ್ತಾ ಬಂದರೂ, ಕಾವೇರಿಯಲ್ಲಿ ನೀರು ಹರಿಯುತ್ತಲೇ ಇದ್ದರೂ ಕಾನೂನು ತಂಡ ಮಾತ್ರ ಅದೇ ಇದೆ. ಅದೇ ತಮಿಳು ನಾಡಿನಲ್ಲಿ ಕಾನೂನು ತಂಡ ಆಗಾಗ ಬದಲಾಗುತ್ತಿರುತ್ತದೆ. ಅಲ್ಲಿ ಸಣ್ಣ ಮತ್ತು ಬುದ್ದಿವಂತ ಕಾನೂನು ತಂಡವಿದ್ದು ಕರ್ನಾಟಕದ ವಿರುದ್ಧ ಗೆಲ್ಲುತ್ತಾ ಬಂದಿದೆ.
ಕರ್ನಾಟಕ ಹೈಕೋರ್ಟ್ ಅಡ್ವೊಕೇಟ್ ಸಿ.ವಿ. ಸುದೀಂಧ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ವಾಸ್ತವತೆ, ಅಂಕಿಅಂಶ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಸರಿಯಾದ ದೃಷ್ಟಿಕೋನದಿಂದ ಕರ್ನಾಟಕದ ವಿಷಯವನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸುವಲ್ಲಿ ನಮ್ಮ ರಾಜ್ಯದ ವಕೀಲರು ವಿಫಲರಾಗಿದ್ದಾರೆ. ವಾದ ಮಂಡನೆಯಲ್ಲಿ ತಂಡ ಎಷ್ಟು ವಿಫಲವಾಗಿದೆಯೆಂದರೆ ತುಂಬ ಕಳಪೆ ಮಟ್ಟದಲ್ಲಿ ರಚಿಸಲಾದ ಮತ್ತು ಸರಿಯಾಗಿ ತಯಾರಿಸದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಲಾಗಿದೆ. ಅವರಿಗೆ ವಾಸ್ತವ ಸ್ಥಿತಿಗತಿ ಬಗ್ಗೆ ಅರಿವಿಲ್ಲ. ಹಾಗಾಗಿ ಇಷ್ಟು ವರ್ಷಗಳವರೆಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಸೋತಿದ್ದಾರೆ. ಹೊಸ ಕಾನೂನು ತಂಡವನ್ನು ಕಾವೇರಿ ವಿಚಾರದಲ್ಲಿ ವಾದ ಮಂಡನೆಗೆ ರಚಿಸಲು ಇದು ಸರಿಯಾದ ಸಮಯ ಎನ್ನುತ್ತಾರೆ.
ತಮಿಳು ನಾಡಿನ ಪರವಾಗಿ 1994ರಿಂದ 2002ರವರೆಗೆ ಕಾವೇರಿ ಹೋರಾಟದಲ್ಲಿ  ವಾದ ಮಾಡಿದ್ದ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಎ.ಕೆ.ಗಂಗೂಲಿ, ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಈ ವಿವಾದವನ್ನು ನಾನು ಎಂದಿಗೂ ರಾಜಕೀಯದಿಂದ ದೂರವಿಟ್ಟು ನೋಡುತ್ತಿದ್ದೆ. ನನಗೆ ತಾಂತ್ರಿಕ ತಂಡ ಮತ್ತು ಕರ್ನಾಟಕದ ವಕೀಲರೊಂದಿಗೆ ಸೌಹಾರ್ದಯುತ ಸಂಬಂಧವಿತ್ತು. ಇಂದು ಕಾವೇರಿ ವಿವಾದವನ್ನು ಇನ್ನಿಲ್ಲದಂತೆ ರಾಜಕೀಯಗೊಳಿಸಲಾಗಿದೆ. ಈ ವಿವಾದವನ್ನು ಬಗೆಹರಿಸಲು ನಮಗೆ ಸಮರ್ಥ ರಾಜಕಾರಣಿಗಳ ಅವಶ್ಯಕತೆಯಿದೆ ಎನ್ನುತ್ತಾರೆ.
ತಮ್ಮ ಮಾತನ್ನು ಮುಂದುವರಿಸಿ ಅವರು, '' ಕಾನೂನು ತಂಡದ ವಿಚಾರಕ್ಕೆ ಬಂದಾಗ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ವಕೀಲರು ತೀರ್ಮಾನಿಸಬೇಕು. ತಮಿಳು ನಾಡಿಗೆ ಪ್ರತಿ ದಿನ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವುದಾಗಿ ನಾರಿಮನ್ ಸುಪ್ರೀಂ ಕೋರ್ಟಿಗೆ ಏಕೆ ಹೇಳಿದರು ಎಂದು ಅವರು ಮತ್ತು ಕರ್ನಾಟಕ ಸರ್ಕಾರಕ್ಕೆ ಮಾತ್ರ ಗೊತ್ತು ಎನ್ನುತ್ತಾರೆ.
ಕರ್ನಾಟಕ ಸಲ್ಲಿಸಿದ ಮಾರ್ಪಾಡು ಅರ್ಜಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಗಂಗೂಲಿ, ನೀರು ಬಿಡುಗಡೆ ಮಾಡದ ಕಾರಣಕ್ಕೆ ಕಾನೂನು, ಸುವ್ಯವಸ್ಥೆಯನ್ನು ಉಲ್ಲೇಖಿಸಲು ಬರುವುದಿಲ್ಲ. ಜಲಾಶಯಗಳಲ್ಲಿ ನೀರಿನ ಮಟ್ಟ ನಿಗದಿತ ಪ್ರಮಾಣಕ್ಕಿಂತ ಕಡಿಮೆ, ಬರಗಾಲ ಪರಿಸ್ಥಿತಿ ಇತ್ಯಾದಿ ವಿಷಯಗಳನ್ನು ನ್ಯಾಯಾಲಯದ ಮುಂದೆ ವಾದಿಸಬಹುದು. ಆದರೆ ಅದನ್ನು ಯಾವ ಕೋರ್ಟ್ ಗಳೂ ಒಪ್ಪುವುದಿಲ್ಲ. ಅನೇಕ ವರ್ಷಗಳಿಂದ ಈಗಿರುವ ಕಾನೂನು ತಂಡ ಇದ್ದರೂ ಕೂಡ ತಂಡದಲ್ಲಿ ಹೊಸಬರ ಅಗತ್ಯವಿದೆ ಎನ್ನುತ್ತಾರೆ.
ನಾರಿಮನ್ ಕ್ಷಮೆ: ಕರ್ನಾಟಕದ ಹಿತಾಸಕ್ತಿಗೆ ಮತ್ತಷ್ಟು ಹಾನಿಕಾರಕವೆಂಬಂತೆ ಕಳಪೆಯ ಅರ್ಜಿ ರಚನೆ ಬಗ್ಗೆ ನಾರಿಮನ್ ನ್ಯಾಯಾಲಯದಲ್ಲಿ ಕ್ಷಮೆ ಕೇಳಿದ್ದು ಮತ್ತಷ್ಟು ಹಿನ್ನಡೆಯನ್ನು ತಂದಿತು. ನ್ಯಾಯಾಲಯದಲ್ಲಿ ಅವರು ಕರ್ನಾಟಕದ ವಾಸ್ತವ ಪರಿಸ್ಥಿತಿ, ಅಂಕಿಅಂಶಗಳನ್ನು ನ್ಯಾಯಾಧೀಶರ ಮನಸ್ಸಿಗೆ ಮನದಟ್ಟು ಮಾಡುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಅವರು.
ಇನ್ನು ಸುಪ್ರೀಂ ಕೋರ್ಟ್ ಅಡ್ವೊಕೇಟ್ ಕೆ.ವಿ.ಧನಂಜಯ್ ತಮ್ಮ ಅಭಿಪ್ರಾಯ ಹೇಳಿ, ಕರ್ನಾಟಕ ಪರ ವಕೀಲರು ವಾಸ್ತವ ಅಂಶವನ್ನು ಕೋರ್ಟ್ ಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಅವರು ತೆಗೆದುಕೊಂಡ ಶುಲ್ಕಕ್ಕೆ ಸರಿಯಾಗಿ ನ್ಯಾಯ ಒದಗಿಸುತ್ತಿಲ್ಲ. ತುಂಬಾ ಜಾಗ್ರತೆ ವಹಿಸಿ ಅರ್ಜಿಯನ್ನು ರಚಿಸಬೇಕಾಗಿತ್ತು. ಅಷ್ಟಕ್ಕೂ ಇದು ಯಾರದೋ ವೈಯಕ್ತಿಕ ವಿಚಾರವಲ್ಲ, ಒಂದು ರಾಜ್ಯದ ಜನರಿಗೆ ನೀರಿಗೆ ಸಂಬಂಧಪಟ್ಟ ವಿಷಯ ಎನ್ನುತ್ತಾರೆ.
ಅಣಕು ವಾದ: ತಮಿಳು ನಾಡಿನ ಆರೋಪಗಳನ್ನು ಎದುರಿಸುವುದು ಹೇಗೆ, ಅದಕ್ಕೆ ಪ್ರತಿವಾದ ಮಾಡುವುದು ಹೇಗೆ ಎಂದು ನಮ್ಮ ರಾಜ್ಯದ ಪರ ವಕೀಲರು ಅಣಕು ವಾದ ನಡೆಸಿ ಅಭ್ಯಾಸ ಮಾಡಬೇಕಾಗಿತ್ತು. ಕೇವಲ ಹಣ ಮಾಡುವುದೇ ಉದ್ದೇಶವಾಗಿರಬಾರದು. ಇದೀಗ ಕಾನೂನು ತಂಡವನ್ನು ಬದಲಾವಣೆ ಮಾಡಲೇಬೇಕು. ಹೊಸ ತಂಡ ಬಂದರೆ ಈಗಿರುವವರಿಗಿಂತ ಚೆನ್ನಾಗಿ ಕೆಲಸ ಮಾಡಬಹುದು. ತಮಿಳು ನಾಡು ಆಗಾಗ ವಕೀಲರನ್ನು ಬದಲಾಯಿಸುತ್ತಲೇ ಇರುತ್ತದೆ ಎಂಬುದು ಅವರ ವಾದ.
ತಮಿಳು ನಾಡು ಅರ್ಜಿ: ತಮಿಳು ನಾಡು ನಿಖರತೆ, ವಸ್ತುನಿಷ್ಠ ದಾಖಲೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿ ಕರ್ನಾಟಕವನ್ನು ವಾದದಲ್ಲಿ ಕುಗ್ಗಿಸಿದೆ. ತಮಿಳು ನಾಡಿಗೆ ನೀರು ಬಿಡದೆ ಕರ್ನಾಟಕ ಸರ್ಕಾರ ಮೋಸದಿಂದ ಬೆಂಗಳೂರು ಮತ್ತು ಇತರೆಡೆಗೆ ಅಕ್ರಮವಾಗಿ ನೀರು ಹರಿಸಿದೆ ಎಂದು ಅದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ. ಕರ್ನಾಟಕ ಅಪ್ರಾಮಾಣಿಕವಾಗಿದ್ದು, ತನ್ನ ವರ್ತನೆಯಲ್ಲಿ ವಕ್ರ ಬುದ್ದಿ ತೋರಿಸಿ ತಮಿಳು ನಾಡಿನ ಜನರ ಹಕ್ಕುಗಳನ್ನು ನಿರಾಶೆಗೊಳಿಸಿದೆ ಎಂದು ಅಲ್ಲಿನ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT