ಬೆಂಗಳೂರು: ಎರಡು ರಾಜ್ಯಗಳ ನಡುವಿನ ವೈಮನಸ್ಸಿಗೆ ಕಾರಣವಾಗಿರುವ ಕಾವೇರಿ ವಿವಾದಕ್ಕೆ ಬೆಂಗಳೂರು ಮೂಲದ ಟೆಕ್ಕಿಯೊಬ್ಬ ನೀಡಿರುವ ಪರಿಹಾರದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಂತೋಷ್. ಜೆ ಎಂಬುವವರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೇವಲ ಒಂದೇ ದಿನದಲ್ಲಿ 25 ಸಾವಿರ ಜನರು ವಿಡಿಯೋವನ್ನು ನೋಡಿದ್ದಾರೆ. ಸಂತೋಷ್ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೋದನೆ ಮಾಡುತ್ತಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ಸಂತೋಷ್ ಅವರು, ಇಂಜಿನಿಯರ್ ಗಳು ವಸ್ತುಗಳ ತಯಾರಿಕೆಗೆ ಐಡಿಯಾಗಳನ್ನು ನೀಡಿ, ಆ ವಸ್ತುಗಳು ಮನೆಗೆ ತಲುಪುವಂತೆ ಮಾಡುತ್ತಿದ್ದಾರೆ. ಆದರೆ, ಕಾವೇರಿ ನದಿ ನೀರು ಸಮಸ್ಯೆಗೆ ಮಾಹಿತಿ ತಂತ್ರಜ್ಞಾನ ಮತ್ತು ಜಲ ಸಂಪನ್ಮೂಲ ಇಂಜಿನಿಯರ್ ಗಳೇಕೆ ಮುಂದೆ ಬಂದು ಶಾಶ್ವತ ಪರಿಹಾರವನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಾವೇರಿ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾವೇರಿ ವಿವಾದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಕಾವೇರಿ ವಿವಾದ ಕುರಿತಂತೆ ಜನರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವ ಅಗತ್ಯವಿದೆ. ನ್ಯಾಯಾಲಯ ನೀಡಿರುವ ಆದೇಶವನ್ನು ಜನರಿಗೆ ಅರ್ಥ ಮಾಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಬುಧವಾರ ಲೈವ್ ನಲ್ಲಿಯೇ ವಿಡಿಯೋವನ್ನು ನೀಡಲಾಗಿತ್ತು. ಈ ವೇಳೆ ಸಾಕಷ್ಟು ಜನರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಸುಪ್ರೀಂ ಆದೇಶವನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸಲು ಸೂಕ್ತವಾದ ಸಂವಹನ ಮಾಧ್ಯಮವಿಲ್ಲ. ಹೀಗಾಗಿ ವಿಡಿಯೋ ಮೂಲಕ ಸರ್ಕಾರ ಹಾಗೂ ಜನರ ನಡುವೆ ಏರ್ಪಟ್ಟಿರುವ ಅಂತರವನ್ನು ಸರಿಪಡಿಸಲು ನಾವು ಹೊರಟಿದ್ದೇವೆ. ಇಂಜಿನಿಯರ್ ಗಳು ಸಮಸ್ಯೆಗೆ ಪರಿಹಾರ ನೀಡುವಂತೆ ಈ ಮೂಲಕ ನಾವು ಅಗ್ರಹಿಸುತ್ತಿದ್ದೇವೆ. ಎಲ್ಲಾ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮವಾಗಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅಥಾವಾ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇವೆಂದು ಹೇಳಿದ್ದಾರೆ.