ರಾಜ್ಯ

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಸ್ಥಗಿತಕ್ಕೆ ಆಗ್ರಹಿಸಿ ನಾಳೆ ಕರ್ನಾಟಕ ಗಡಿ ಬಂದ್

Srinivasamurthy VN

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 19 ಮತ್ತು 20 ರಂದು ತಮಿಳುನಾಡು-ಕರ್ನಾಟಕ ಗಡಿ ಬಂದ್‌  ಮಾಡುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯಕ್ಕೆ ಸತತ ಕಾವೇರಿ ನೀರು ಹರಿಯುತ್ತಿದ್ದರೂ ವಿನಾ ಕಾರಣ ಅಲ್ಲಿ ಬಂದ್‌ ಮಾಡಲಾಗಿದೆ. ಅಲ್ಲಿನ ಮುಖ್ಯಮಂತ್ರಿ  ಜಯಲಲಿತಾ ಅವರಿಗೆ ನೀರಿಗಿಂತ ನೀರಿನ ರಾಜಕೀಯವೇ ದೊಡ್ಡದಾಗಿದೆ. ಹೀಗಾಗಿ ನೀರಿಗಿಂತ ಹೆಚ್ಚಾಗಿ ಅವರು ರಾಜಕೀಯ ಹೋರಾಟ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಎರಡು ದಿನ ಗಡಿ  ಬಂದ್‌ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯದ ರಾಜಕೀಯ ಪಕ್ಷಗಳು ಮತ್ತು ರಾಜ್ಯದ ಸಂಸದರ ವಿರುದ್ಧ ಕಿಡಿ ಕಾರಿದ ವಾಟಾಳ್ ನಾಗರಾಜ್ ಅವರು, "ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸಂಸದರಿಗೆ ರೈತರ ಸಮಸ್ಯೆ  ಬೇಕಿಲ್ಲ. ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಆಗುವ ತೊಂದರೆಯ ಅರಿವು ಕೂಡ ಅವರಿಗಿಲ್ಲ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಮನವಿ  ಮಾಡಿದರೆ ರಾಜ್ಯದ ಬಿಜೆಪಿ ಸಂಸದರು, ಪ್ರಧಾನಿ ಏಕೆ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಶ್ನಿಸುವಂತ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಕೂಡಲೇ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಸಿ, ಮಧ್ಯಸ್ಥಿಕೆ ವಹಿಸಲು ಕರೆತರಬೇಕು. ಈ ವಿಚಾರದಲ್ಲಿ ಪಕ್ಷಾತೀತವಾಗಿ  ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಕಾವೇರಿ ಜತೆಗೆ ಮಹದಾಯಿ ವಿವಾದವನ್ನು ಕೂಡ ಪ್ರಧಾನಿಗಳೇ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಎಲ್ಲ ಸಂಸದರ ಮನೆ ಮುಂದೆಯೂ ಕನ್ನಡ ಪರ  ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಕೆ ನೀಡಿದರು.

SCROLL FOR NEXT