ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆ ಬಿಡದಿ ಸಮೀಪದಲ್ಲಿರುವ ಈಗಲ್‌ಟನ್ ರೆಸಾರ್ಟ್ ರಾಜ್ಯ ಸರ್ಕಾರ 998 ಕೋಟಿ ರುಪಾಯಿ ದಂಡ ವಿಧಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು, ಈಗಲ್ ಟನ್ ರೆಸಾರ್ಟ್ ಸುಮಾರು 100 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಪೈಕಿ 23 ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ. ಉಳಿದ 77 ಎಕರೆ ಜಮೀನಿಗೆ ತಕ್ಷಣ 998 ಕೋಟಿ ರುಪಾಯಿ ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ಹಣ ಪಾವತಿಸದಿದ್ದರೆ ಈ ಎಲ್ಲ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಅಲ್ಲದೆ ಒತ್ತುವರಿ ಜಮೀನಿಗೆ ಚದರ ಅಡಿ ಲೆಕ್ಕದಲ್ಲಿ ದರ ನಿಗದಿಪಡಿಸಲಾಗಿದೆ. ಈ ಹಣವನ್ನು ತಕ್ಷಣ ಪಾವತಿಸಬೇಕು ಎಂದು ರೆಸಾರ್ಟ್‌ನವರಿಗೆ ತಿಳಿಸಲಾಗಿದೆ ಎಂದರು.
ರೆಸಾರ್ಟ್ ನಿಂದ ಬರುವ ದಂಡದ ಹಣವನ್ನು ಬೆಂಗಳೂರು ನಗರದ ಸುತ್ತ ಮತ್ತೊಂದು ವರ್ತುಲ ರಸ್ತೆ, ಮೇಲ್ಸೇತುವೆಗಳ ನಿರ್ಮಾಣಕ್ಕೆ ಬಳಸಿಕೊಳ್ಳುವ ಉದ್ದೇಶವಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಇದೇ ವೇಳೆ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳುವುದನ್ನು ತಡೆಯದಿದ್ದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಆಯಾ ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ಗ್ರಾಮ ಲೆಕ್ಕ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos