ಬೆಂಗಳೂರು: ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ತೆಂಗು ಬೆಳೆಗಾರರು ನೀರಾ ಇಳಿಸುವಂತೆ ಅನುವು ಮಾಡಿಕೊಡಲು ‘ನೀರಾ ನೀತಿ’ಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ನೀರಾ ಇಳಿಸಲು ಸಮಗ್ರ ಕಾನೂನೊಂದನ್ನು ಜಾರಿಗೆ ತರಬೇಕೆಂಬುದು ರೈತರ ಹಲವು ದಿನಗಳ ಬೇಡಿಕೆಯಾಗಿತ್ತು ಎಂದರು .
ಈ ನೀತಿ ಅನ್ವಯ ಸೀಮಿತ ಪ್ರಮಾಣದಲ್ಲಿ ನೀರಾ ಉತ್ಪಾದನೆ ಮಾಡಿ ಮಾರಾಟ ಮಾಡಲು ಸಂಘ– ಸಂಸ್ಥೆಗಳಿಗೆ ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.
ನೀರಾ ಇಳಿಸುವುದರಿಂದ ತೆಂಗಿನ ಮರಗಳಿಗೆ ಹೆಚ್ಚಿನ ಶಕ್ತಿ ಬರುತ್ತದೆ. ನೀರಾ ಇಳಿಸುವುದರಿಂದ ಅವುಗಳ ಉತ್ಪನ್ನಗಳಿಂಗ ರೈತರಿಗೆ ಹೆಚ್ಚುವರಿ ಲಾಭ ಸಿಗುತ್ತದೆ ಎಂದು ಹೇಳಿದ ಅವರು ನೀರಾವನ್ನು ಪ್ಯಾಕೆಟ್ ಗಳಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆಯೆಂದು ತಿಳಿಸಿದರು.
ನೀರಾ ಇಳಿಸುವವರು ಮತ್ತು ಮಾರಾಟ ಮಾಡುವವರು ತೆಂಗು ಬೆಳೆಗಾರರ ಒಕ್ಕೂಟದ ಸದಸ್ಯರಾಗಿರಬೇಕು ಎಂಬ ಷರತ್ತು ಹಾಕಲಾಗುವುದು ಎಂದ ಅವರು ತಿಳಿಸಿದರು.
ರಾಜ್ಯದಲ್ಲಿ 12 ಸಂಸ್ಥೆಗಳು ನೀರಾ ಉತ್ಪಾದನೆಗೆ ಮುಂದೆ ಬಂದಿವೆ. ನೀರಾ ಸಂಸ್ಕರಣೆ, ರಫ್ತಿಗೆ ಕೂಡ ಅವಕಾಶ ಸಿಗಲಿದೆ ಎಂದು ವಿವರಿಸಿದರು.