ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸರ್ವಪಕ್ಷ ಸಭೆಗೆ ಗೈರು ಹಾಜರಾಗುವ ಮೂಲಕ ನಗರ ಜನತೆಯ ಕೆಂಗಣ್ಣಿಗೆ ಬಿಜೆಪಿ ಇದೀಗ ಗುರಿಯಾಗಿದೆ.
ಕಾವೇರಿ ವಿವಾದ ಕುರಿತಂತೆ ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸೆ.24 ರಿಂಗ 26 ರವರೆಗೂ ತಮಿಳುನಾಡಿಗೆ 6000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ತಿಳಿಸಿತ್ತು.
ರಾಜ್ಯದಲ್ಲಿ ನೀರಿನ ಅಭಾವವುಂಟಾಗಿದ್ದು, ನೀರನ್ನು ಬಿಡುಗಡೆ ಮಾಡುವ ಪರಿಸ್ಥಿತಿಯಲ್ಲಿ ರಾಜ್ಯ ಇಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಿದ್ದರಾಮಯ್ಯ ಅವರು ಬುಧವಾರ ಸರ್ವಪಕ್ಷ ಸಭೆಯನ್ನು ಕರೆದಿದ್ದರು.
ಆದರೆ, ಈ ಹಿಂದೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದಾಗ ತಮಿಳುನಾಡಿಗೆ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿದ್ದೆವು. ನಮ್ಮ ಮಾತನ್ನು ತಿರಸ್ಕರಿಸಿ ಸಿದ್ದರಾಮಯ್ಯ ಅವರು ನೀರನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ ಸರ್ವಪಕ್ಷ ಸಭೆಗೆ ಬಿಜೆಪಿ ನಾಯಕರಾರು ಹಾಜರಾಗುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಇದರಂತೆ. ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಗೈರು ಹಾಜರಾಗಿತ್ತು.
ಬಿಜೆಪಿಯ ಈ ನಿಲುವಿಗೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ರಾಜ್ಯ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದು, ನೀರು ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ನಗರ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ವಿರುದ್ಧ ವಿರೋಧಗಳು ವ್ಯಕ್ತವಾಗುತ್ತಿದ್ದು, ಕೆಲವರು ಬಿಜೆಪಿ ನಾಯಕರನ್ನು ದೂಷಿಸುತ್ತಿದ್ದರೆ, ಮತ್ತೆ ಕೆಲವು ವಿವಾದ ಕುರಿತಂತೆ ಮಧ್ಯಸ್ಥಿಕೆವಹಿಸದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೂಷಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರು ತಮಿಳುನಾಡು ಕುರಿತಂತೆ ಪಕ್ಷಪಾತ ಮಾಡುತ್ತಿದ್ದು, ಈ ಬಗೆಗಿನ ಅಭಿಪ್ರಾಯವೊಂದು ಪ್ರಧಾನಿಯವರ ಟ್ವಿಟರ್ ಖಾತೆಗೆ ಟ್ಯಾಗ್ ಆಗಿದೆ.
ಇನ್ನು ಕೆಲವರು ಮಾಜಿ ಪ್ರಧಾನಮಂತ್ರಿ ಹೆಚ್. ಡಿ.ದೇವೇಗೌಡ ಅವರನ್ನು ಹೊಗಳುತ್ತಿದ್ದರೆ, ಸಂಕಷ್ಟ ಎದುರಿಸುವಲ್ಲಿ ವಿಫಲಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಲವರು ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ಅಶ್ರಿತ್ ಶೆಟ್ಟಿ ಎಂಬುವವರು ವಿವಾದ ಕುರಿತಂತೆ ಬರೆದುಕೊಂಡಿದ್ದು, ಸಿದ್ದರಾಮಯ್ಯ ಅವರು ಕರೆದಿದ್ದ ಸರ್ವ ಪಕ್ಷ ಸಭೆಗೆ ಅಷ್ಟೇ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಬಂದಿರಲಿಲ್ಲ. ಸಿದ್ದರಾಮಯ್ಯ ಅವರು ಸಭೆಗೆ ಬಂದಾಗ ಸಭೆಯಲ್ಲಿ ನಿಂತು ಮುಖ್ಯಮಂತ್ರಿ ಸ್ಥಾನಕ್ಕೆ ನೀಡಬೇಕಿದ್ದ ಗೌರವವನ್ನು ಸೂಚಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸಭೆಗೆ ಹಾಜರಾಗದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಯವರ ಕೆಟ್ಟ ರಾಜಕೀಯ ನಾಟಕವಾಡುತ್ತಿದ್ದು, ಆ ಪಕ್ಷಕ್ಕೆ ನಾಚಿಕೆಯಾಗಬೇಕು. ಕುಡಿಯುವ ನೀರಿನ ಕುರಿತಂತೆ ಸಭೆ ನಡೆಸಲಾಗಿದ್ದು, ಬಿಜೆಪಿ ನಾಯಕರು ಸಭೆಗೆ ಹಾಜರಾಗಬೇಕಿತ್ತು ಎಂದು ದೀಪಕ್ ವಿ.ಜೆ ಎಂಬುವವರು ಹೇಳಿಕೊಂಡಿದ್ದಾರೆ.
ಇನ್ನು ಕೆಲವರು ಕಾವೇರಿ ವಿವಾದ ಕುರಿತಂತೆ ಬಿಜೆಪಿ ಹಾಗೂ ಮೋದಿಯವರನ್ನು ದೂಷಿಸುವುದರಲ್ಲಿ ಏನಿದೆ?...ಸಿದ್ದರಾಮಯ್ಯ ಅವರ ನಿರ್ಲಕ್ಷ್ಯತನದಿಂದ ಸಮಸ್ಯೆ ಎದುರಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.