ರಾಜ್ಯ

ಕಾವೇರಿ ವಿವಾದ: ಪ್ರಧಾನಿಗೆ ಪತ್ರ ಬರೆದ ರಮ್ಯಾ

Sumana Upadhyaya
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲೆಯ ಮಾಜಿ ಸಂಸದೆ ರಮ್ಯಾ ತಮ್ಮ ಫೇಸ್ ಬುಕ್ ಪುಟದಲ್ಲಿ ಪರಿಹಾರ ಕಂಡುಕೊಳ್ಳಲು ಬಯಸಿದ್ದಾರೆ. ಈ ವಿವಾದದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಅವರ ಮನವಿಯ ಸಾರಾಂಶ ಹೀಗಿದೆ: ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ತಪ್ಪು ಒಪ್ಪಂದದಿಂದಾಗಿ ಈ ವಿವಾದ ಉಂಟಾಗಿದೆ. ಈ ಒಪ್ಪಂದವನ್ನು ಬದಲಾಯಿಸದಿದ್ದರೆ ಕಾವೇರಿ ವಿವಾದ ಬಗೆಹರಿಯಲು ಸಾಧ್ಯವಿಲ್ಲ. ಹೀಗಾಗಿ ಈ ವಿಷಯದಲ್ಲಿ ಖಂಡಿತವಾಗಿಯೂ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಬೇಕು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ನಡೆಸಿ ವಿವಾದಕ್ಕೊಂದು ಅಂತ್ಯ ಹಾಡಲೇ ಬೇಕು. ಎರಡೂ ರಾಜ್ಯಗಳವರು ಒಪ್ಪುವ ರೀತಿಯಲ್ಲಿ ಪ್ರಧಾನಿಯವರು ಒಂದು ತೀರ್ಮಾನ ನೀಡಬೇಕು ಎಂದು ರಮ್ಯಾ ಪತ್ರದಲ್ಲಿ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.
ಅಲ್ಲದೆ ಪ್ರಧಾನಿಯವರಿಗೆ ಬರೆದ ಪತ್ರದ ಪ್ರತಿಯನ್ನು ಜನಸಾಮಾನ್ಯರು ತೆಗೆದುಕೊಂಡು ಅದರಲ್ಲಿ ತಮ್ಮ ಕ್ಷೇತ್ರದ ಸಂಸದರ ಸಹಿ ಪಡೆದು ಅವರ ಭಾವಚಿತ್ರ ಅಪ್ ಲೋಡ್ ಮಾಡಿ ತಮ್ಮ ಸಾಮಾಜಿಕ ತಾಣದಲ್ಲಿ ಹ್ಯಾಶ್ ಟಾಗ್ ನೊಂದಿಗೆ ಟುಗೆದರ್ ಫಾರ್ ಕಾವೇರಿ ಎಂದು ಬರೆದು ಹಾಕುವಂತೆ ಮನವಿ ಮಾಡಿದ್ದಾರೆ. ಅಲ್ಲದೆ cauverymemorandum@gmail.com ಗೆ ಇ ಮೇಲ್ ಕಳುಹಿಸಿ ಎಂದು ರಮ್ಯಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ನ ಕೊನೆಗೆ ಕರ್ನಾಟಕದ ಸಂಸದರು, ಅವರ ಕ್ಷೇತ್ರ, ಜಿಲ್ಲೆ ಮತ್ತು ಪಕ್ಷದ ವಿವರಗಳನ್ನೂ ನೀಡಿದ್ದಾರೆ. ಫೇಸ್ ಬುಕ್ ಲಿಂಕ್ ಇಲ್ಲಿದೆ.
SCROLL FOR NEXT