ಮೈಸೂರು: ಮಂಗಳೂರು, ಮೈಸೂರು ಮೊದಲ ಬಯಲು ಶೌಚಮುಕ್ತ ನಗರಗಳಾಗಿ ಹೊರಹೊಮ್ಮಿದ್ದು, ಎರಡೂ ನಗರಗಳನ್ನು ಬಯಲು ಶೌಚಾಲಯ ಮುಕ್ತ ನಗರವೆಂದು ಘೋಷಣೆ ಮಾಡಲು ಸಕಲ ಸಿದ್ಧತೆಗಳು ನಡೆಸಲಾಗಿದೆ.
10 ಲಕ್ಷ ಜನಸಂಖ್ಯೆ ದಾಟಿದ ದೇಶದ ನಗರಗಳ ಪೈಕಿ ಮೈಸೂರು ಹಾಗೂ ಮಂಗಳೂರು ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯ ಮಟ್ಟವನ್ನು ಸುಧೀರಿಸುವ ನಿಟ್ಟಿನಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಭಾರತೀಯ ಗುಣಮಟ್ಟ ಮಂಡಳಿ (ಕ್ಯೂಸಿಐ) 75 ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು.
ಸಮೀಕ್ಷೆಯ ಫಲಿತಾಂಶದಂತೆ ಮೈಸೂರು ಹಾಗೂ ಮಂಗಳೂರು ಎರಡು ನಗರಗಳನ್ನು ಬಯಲು ಶೌಚಾಲಯ ಮುಕ್ತ ನಗರವೆಂದು ಘೋಷಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ಸೆ.30 ರಂದು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಪ್ರಶಸ್ತಿಯನ್ನು ವಿತರಿಸಲಿದ್ದಾರೆ.
ಇನ್ನು ಈ ಹೆಗ್ಗಳಿಕೆಗೆ ಸಾಕಷ್ಟು ಸಂತಸ ವ್ಯಕ್ತಪಡಿಸಿರುವ ಮೈಸೂರು ಮಹಾನಗರ ಪಾಲಿಕೆಯು, ಸಂಭ್ರಮವನ್ನು ಆಚರಿಸಲು ಸೆ.27 ರಂದು ಪುರಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಸ್ವಚ್ಛತಾ ನಗರಿ ಎಂಬ ಹಿರಿಮೆಯೊಂದಿಗೆ ಬಯಲು ಶೌಚಾಲಯ ಮುಕ್ತ ನಗರವೆಂಬ ಗರಿಯೂ ಮೈಸೂರಿಗೆ ದೊರೆತಿದೆ. ಇದು ಬಹಳ ಸಂತೋಷದ ಸಂಗತಿ. ಮೈಸೂರು ಜೊತೆಗೆ ವಿಜಯವಾಡ ಕೂಡ ಈ ಖ್ಯಾತಿ ಪಡೆಯಲು ಸ್ಪರ್ಧೆಯಲ್ಲಿತ್ತು. ಆದರೆ, ಕೊನೆಯ ಹಂತದಲ್ಲಿ ವಿಜಯವಾಡವನ್ನು ಹಿಂದಿಕ್ಕಿ ಮೈಸೂರು ಹೆಗ್ಗಳಿಕೆಗೆ ಪಾತ್ರವಾಯಿತು ಎಂದು ಮೇಯರ್ ಬಿ.ಎಲ್. ಭೈರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಗರವನ್ನು ಬಯಲು ಶೌಚಾಲಯ ಮುಕ್ತ ನಗರವೆಂದು ಘೋಷಿಣೆ ಮಾಡಲು ಕೇಂದ್ರದ ಸಮೀಕ್ಷಾ ತಂಡವೊಂದು ಆಗಮಿಸಿ ಪಾಲಿಕೆಗೆ ತಿಳಿಯದ ರೀತಿಯಲ್ಲಿ ಸಮೀಕ್ಷೆಯನ್ನು ನಡೆಸಿದೆ. ಅಲ್ಲದೆ, ನಗರದಲ್ಲಿ ನಿಬಂಧನೆಗನುಣವಾಗಿ ಎಲ್ಲಾ ಅಗತ್ಯ ಸ್ಥಿತಿ, ಮೂಲಕ ಸೌಕರ್ಯವನ್ನು ಹೊಂದಿದೆಯೇ ಎಂಬುದನ್ನೂ ಕೂಡ ಪರಿಶೀಲನೆ ನಡೆಸಲಾಗಿದೆ.
ನಂತರ ಪಾಲಿಕೆ ಸದಸ್ಯರ ಮೂಲಕ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ. ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳು, ಅದರ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಮನೆ ಹಾಗೂ ಶಾಲೆಗಳಲ್ಲಿ ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ ಬಳಕೆ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.
ನಂತರ ಪಾಲಿಕೆ ಆಯುಕ್ತರು, ಸ್ವ-ಸಹಾಯ ಸಂಘಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ಎಲ್ಲಾ ರೀತಿಯಲ್ಲಿ ತಪಾಸಣೆ ಮಾಡಿದ ಬಳಿಕ ವರದಿಯನ್ನು ಪರಿಗಣಿಸಿ ಬಯಲು ಶೌಚಾಲಯ ಮುಕ್ರ ನಗರವೆಂದು ಘೋಷಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.