ಕಲ್ಲಪ್ಪ ಕುಟುಂಬದ ಜೊತೆ ಸಿಎಂ
ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಪತ್ನಿ ವಿದ್ಯಾ ಕಲ್ಲಪ್ಪ ಹಂಡಿಭಾಗ್ ಅವರಿಗೆ ರಾಜ್ಯ ಸರ್ಕಾರ ಸೋಮವಾರ ಉಪ ನೋಂದಣಾಧಿಕಾರಿ ಹುದ್ದೆ ನೀಡಿದೆ.
ವಿದ್ಯಾ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಮೃತ ಡಿವೈಎಸ್ಪಿ ಪತ್ನಿಗೆ ನೇಮಕಾತಿ ಆದೇಶವನ್ನು ಹಸ್ತಾಂತರಿಸಿದರು.
ತಮ್ಮ ವಿರುದ್ಧ ಲಂಚ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಲ್ಲಪ್ಪ ಹಂಡಿಭಾಗ್ ಅವರು ಜುಲೈ 5ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿರುವ ಮಾವನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದವರಾದ ಕಲ್ಲಪ್ಪ ಹಂಡಿಭಾಗ್ ಅವರು ಮೂರು ವರ್ಷಗಳ ಹಿಂದೆ ಮುರಗೋಡ ಗ್ರಾಮದ ವಿದ್ಯಾ ಎಂಬುವವರನ್ನು ವಿವಾಹವಾಗಿದ್ದರು. ಕಲ್ಲಪ್ಪ, ವಿದ್ಯಾ ದಂಪತಿಗೆ 1 ವರ್ಷದ ಗಂಡು ಮಗುವಿದೆ.