ಬಸ್ ನಿರ್ವಾಹಕನ ಮೃತದೇಹ ಪತ್ತೆ
ಸುಬ್ರಹ್ಮಣ್ಯ: ಪ್ರಯಾಣಿಕರ ಯುವತಿ ಜತೆ ಚಿಲ್ಲರ ಹಣದ ಜಗಳ, ಪೊಲೀಸ್ ವಿಚಾರಣೆಯಿಂದ ಮನನೊಂದು ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಸ್ ನಿರ್ವಾಹಕ ದೇವದಾಸ್ ಅವರ ಮೃತದೇಹ ಪತ್ತೆಯಾಗಿದೆ.
ಪ್ರಕರಣದಿಂದ ತೀವ್ರವಾಗಿ ಮನನೊಂದಿದ್ದ 47 ವರ್ಷದ ದೇವದಾಸ್ ಅವರು ಚಲಿಸುತ್ತಿದ್ದ ಬಸ್ ನಿಂದ ಭಾನುವಾರ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೇವದಾಸ್ ಅವರ ಮೃತದೇಹ ಪತ್ತೆಗಾಗಿ ಪುತ್ತೂರಿನ ಅಗ್ನಿಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರ ನದಿಯಲ್ಲಿ ಶೋಧ ಕಾರ್ಯ ನಡೆಸಿತ್ತು. ಕಳೆದ ಮೂರು ದಿನಗಳಿಂದ ತೀವ್ರ ಶೋಧ ನಡೆಸಿದ ಬಳಿಕ ಇದೀಗ ದೇವದಾಸ್ ಅವರ ಮೃತದೇಹ ಪತ್ತೆಯಾಗಿದೆ.
ಕೆಎಸ್ಆರ್ಟಿಸಿ ಬಸ್ ನಿರ್ವಾಹಕರಾಗಿದ್ದ ದೇವದಾಸ್ ಅವರಿಗೆ ಕಳೆದ ಭಾನುವಾರ ತಮ್ಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು 500 ರುಪಾಯಿ ಕೊಟ್ಟಿದ್ದೇನೆ ಚಿಲ್ಲರೆ ಕೊಡಿ ಎಂದು ತಗಾದೆ ತೆಗೆದಿದ್ದಾಳೆ. ಇದಕ್ಕೆ ನಿರ್ವಾಹಕ ದೇವದಾಸ್ ಅವರು ಇಲ್ಲ ನೀವು ಕೊಟ್ಟಿದ್ದು 100 ರುಪಾಯಿ ಎಂದು ವಾದಿಸಿದ್ದರು. ಈ ವಿಚಾರವಾಗಿ ಕಡಬ ಠಾಣೆಯಲ್ಲಿ ನಿರ್ವಾಹಕ ಮತ್ತು ಯುವತಿಯನ್ನು ಪೊಲೀಸರು ತನಿಖೆ ನಡೆಸಿದ್ದರು.
ಬಳಿಕ ಬಸ್ ಹತ್ತಿದ ನಿರ್ವಾಹಕ ನದಿಗೆ ಹಾರುವ ಮೊದಲು ಲಾಗ್ ಶೀಟ್ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದರು. ಅದರಲ್ಲಿ ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ ಲೇಸು ನನ್ನ ಸಹವರ್ತಿಗಳಿಗೆ ಕೊನೆ ನಮಸ್ಕಾರಗಳು ಎಂದು ಬರೆದಿದ್ದರು.