ರಾಜ್ಯ

ಮಾಹಿತಿ ಕೇಳಿದ ಆರ್ ಟಿಐ ಕಾರ್ಯಕರ್ತನ ವಿರುದ್ಧ ಕೇಸ್ ದಾಖಲಿಸಿದ ಬಿಬಿಎಂಪಿ ಅಧಿಕಾರಿ

Lingaraj Badiger
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ತನ್ನ ಪ್ರದೇಶದ ರಸ್ತೆಯ ಬಗ್ಗೆ ಮಾಹಿತಿ ಕೇಳಿದ ಆರ್ ಟಿಐ ಕಾರ್ಯಕರ್ತನ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಬಿಬಿಎಂಪಿಯ ಪುಲಕೇಶಿನಗರ ಸಹಾಯಕ ಎಂಜಿನಿಯರ್ ರವಿ ವಡ್ಡರ್ ಅವರು ಆರ್ ಟಿಐ ಕಾರ್ಯಕರ್ತ ಶಿವಕುಮಾರ್ ಎಂಬುವವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಉದ್ದೇಶಪೂರ್ವಕವಾಗಿ ಅವಮಾನ ಪ್ರಕರಣ ದಾಖಲಿಸಿದ್ದಾರೆ.
ನಮ್ಮ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಕಟ್ಟಡ ನಿರ್ಮಾಣವನ್ನು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಮತ್ತು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ರವಿ ವಡ್ಡರ್ ಅವರು ನನ್ನ ಹಾಗೂ ನನ್ನ ಸ್ನೇಹಿತ ಆರ್ ಟಿಐ ಕಾರ್ಯಕರ್ತ ಬಿ ಟೋನಿ ಸಿಂಗ್ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಶಿವಕುಮಾರ್ ಆರೋಪವನ್ನು ತಳ್ಳಿಹಾಕಿರುವ ರವಿ ವಡ್ಡರ್ ಅವರು, ಆರ್ ಟಿಐ ಕಾರ್ಯಕರ್ತನ ವಿರುದ್ಧದ ದೂರಿನ ಹಿಂದೆ ಯಾವುದೇ ಪ್ರಚೋದನೆ ಅಥವಾ ದುರುದ್ದೇಶ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಸರ್ಕಾರಿ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪುಲಕೇಶಿನಗರ ಪೊಲೀಸ್ ಠಾಣೆಯ ಪೊಲೀಸರು ಖಚಿತಪಡಿಸಿದ್ದಾರೆ.
SCROLL FOR NEXT