ಬೆಂಗಳೂರು: ಕಾವೇರಿ ವಿವಾದ ಸಂಬಂಧ ಶುಕ್ರವಾರ ರಾಜ್ಯದ ಪರ ವಕೀಲ ನಾರಿಮನ್ ಯಾವುದೇ ವಾದ ಮಂಡಿಸಲಿಲ್ಲ. ಕಕ್ಷಿದಾರನು ಕೋರ್ಟ್ ನೀಡಿದ ಆದೇಶ ಪಾಲನೆ ಮಾಡದಿರುವ ಕಾರಣ, ‘ನ್ಯಾಯಾಲಯದೆದುರು ಯಾವುದೇ ಸಮರ್ಥನೆ ನೀಡುವುದು ಅಸಾಧ್ಯ’ ಎಂಬ ನಿಲುವು ತಾಳಿದ ಫಾಲಿ ನಾರಿಮನ್ ನೇತೃತ್ವದ ಕಾನೂನು ತಂಡವು ಕರ್ನಾಟಕದ ಪರ ವಾದ ಮಂಡನೆಯಿಂದಲೇ ಹಿಂದೆ ಸರಿದಿದೆ.
ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರನ್ನ ಭೇಟಿ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ವಕೀಲ ನಾರಿಮನ್ ಅವರಿಗೆ ಪತ್ರ ಬರೆದಿದ್ದರು. ಕೇಂದ್ರದ ಮಧ್ಯಸ್ಥಿಕೆಯಲ್ಲಿ ಗುರುವಾರ ನಡೆದ ಸಂಧಾನ ಸಭೆಯಲ್ಲಿ, ವಸ್ತುಸ್ಥಿತಿ ಅರಿಯಲು ಕಾವೇರಿ ಕಣಿವೆಗೆ ತಜ್ಞರ ತಂಡವನ್ನು ಕಳುಹಿಸುವಂತೆ ನಾವು ಸಲ್ಲಿಸಿದ ಬೇಡಿಕೆಗೆ ತಮಿಳುನಾಡು ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯವಾಗಿದೆ. ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಸೆ. 27ರಂದು ಆದೇಶ ಹೊರಡಿಸಿದ್ದರ ಬಗ್ಗೆ ಸರ್ವ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಲು ನಡೆದ ಸಭೆಯಲ್ಲಿ ಕೇಂದ್ರದ ಮೂವರು ಸಚಿವರು ಮತ್ತು ಮಂತ್ರಿಮಂಡಲದ ಸಹೋದ್ಯೋಗಿಗಳು ಸೇರಿದಂತೆ ಇತರ ಪಕ್ಷಗಳ ಮುಖಂಡರು ನೀರು ಬಿಡದಿರುವ ಶಾಸನಸಭೆಯ ನಿರ್ಣಯಕ್ಕೆ ಬದ್ಧವಾಗಿರುವಂತೆ ಸೂಚಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ನೀವು ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಧೀಶರ ಗಮನಕ್ಕೆ ತರಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಪಾಲಿಸುವಂತೆ ರಾಜ್ಯಕ್ಕೆ ಸಲಹೆ ನೀಡಿದ್ದ ನಾರಿಮನ್, ಸಿದ್ದರಾಮಯ್ಯ ಪತ್ರ ಓದಿದ ನಂತರ, ವಾದ ಮಂಡಿಸಲು ಎದುರಾದ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ, ನ್ಯಾಯಾಲಯದ ಅವಿಭಾಜ್ಯ ಅಂಗವೂ, ಕೋರ್ಟ್ ಅಧಿಕಾರಿಯೂ ಆಗಿರುವ ನಾನು, ನ್ಯಾಯಾಂಗದ ಘನತೆಯನ್ನು ಕಾಪಾಡುವ ಕರ್ತವ್ಯ ನಿಭಾಯಿಸಬೇಕು. ಹಾಗಾಗಿ ಕಕ್ಷಿದಾರನ ಪರ ವಾದ ಮಂಡನೆಗೆ ನೈತಿಕ ಬಲ ಇಲ್ಲ’ ಎಂಬ ಕಾರಣ ನೀಡಿ ವಾದ ಮಂಡನೆಯಿಂದ ಹೊರಗುಳಿಯುತ್ತಿದ್ದೇನೆ ಎಂದು ಪ್ರತಿ ಉತ್ತರ ನೀಡಿದ್ದಾರೆ.