ರಾಜ್ಯ

ಬಂಡೀಪುರ ಅಭಯಾರಣ್ಯದ ಪ್ರಮುಖ ಆಕರ್ಷಣೆ 'ಪ್ರಿನ್ಸ್' ಇನ್ನಿಲ್ಲ!

Srinivasamurthy VN

ಬೆಂಗಳೂರು: ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ ಹುಸಿ ಪ್ರಿನ್ಸ್ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.

14 ವರ್ಷ ಪ್ರಾಯದ ಹುಲಿಯ ಕಳೇಬರ ಬಂಡೀಪುರ ಅಭಯಾರಣ್ಯದ ಕುಂಡಕೆರೆ ಸಮೀಪದಲ್ಲಿ ಪತ್ತೆಯಾಗಿದ್ದು, ಈ ಕಳೇಬರ ಪ್ರಿನ್ಸ್ ಹುಲಿಯದ್ದೇ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಹುಲಿಯನ್ನು ಮರಣೋತ್ತರ ಪರೀಕ್ಷೆಗೆ  ಒಳಪಡಿಸಲಾಗಿದ್ದು, ಪರೀಕ್ಷೆ ವೇಳೆ ಹುಲಿಯ ಹೊಟ್ಟೆ ಖಾಲಿಯಾಗಿರುವುದು ಕಂಡುಬಂದಿದೆ. ಹೀಗಾಗಿ ಹಸಿವಿನಿಂದಾಗಿಯೇ ಹುಲಿ ಸಾವನ್ನಪ್ಪಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಆದರೂ ಹುಲಿಯ ಉಗುರು ಮತ್ತು ದೇಹಲ ಕೆಲ ಅಂಗಗಳ ಪರೀಕ್ಷೆ ನಡೆಸಲಾಗುತ್ತಿದ್ದು, ಹುಲಿ ಸಾವಿನಲ್ಲಿ ಏನಾದರೂ ಸಂಚು ಅಡಗಿದೆಯೇ ಎಂಬ ವಿಚಾರ ತಿಳಿಯಲು ಪರೀಕ್ಷೆ ನಡೆಸಲಾಗುತ್ತಿದೆ.

ಇನ್ನು ಪ್ರಿನ್ಸ್ ಹುಲಿ ವಾಸವಿದ್ದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬರ ಪರಿಣಾಮ ನೀರಿಗೆ ವ್ಯಾಪಕ ಕೊರೆತೆ ಇತ್ತು. ಅಲ್ಲದೆ ಇಲ್ಲಿನ ಪ್ರಾಣಿಗಳು ನೀರಿಲ್ಲದ ಕಾರಣ ಬೇರೆಡೆ ತೆರಳಿದ್ದು, ಪ್ರಿನ್ಸ್ ಹುಲಿಗೆ ಬೇಟೆಯ ಕೊರೆತೆ ಎದುರಾಗಿತ್ತು.  ಅಂತೆಯೇ ನೀರು ಮತ್ತು ಆಹಾರ ದೊರೆಯದ ಕಾರಣ ಹುಲಿ ಪ್ರಿನ್ಸ್ ದೇಹ ಕೃಶವಾಗಿತ್ತು. ಇದೇ ಕಾರಣಕ್ಕೆ ಹುಲಿ ಬೇಟಿಯಾಡಲು ಸಾಧ್ಯವಾಗದೇ ಹಸಿವಿನಿಂದ ಸಾವನ್ನಪ್ಪಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2 ದಿನದ ಹಿಂದೆ ಬಂಡಿಪುರ ನ್ಯಾಷನಲ್‌ ಪಾರ್ಕ್ನ ಕುಂದಕೆರೆ ವಲಯದ ಲೊಕ್ಕೆರೆ ಬೀಟ್‌ ಪ್ರದೇಶದಲ್ಲಿ ಹುಲಿಯ ಕಳೇಬರವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೈಮೇಲೆ ಯಾವುದೇ ಗಾಯಗಳಾಗಿರುವುದು ಪತ್ತೆ ಆಗಿರಲಿಲ್ಲ.  ಹುಲಿಯ ಉಗುರುಗಳು ಕೂಡ ಅಷ್ಟೇ ನಿಖರವಾಗಿದ್ದವು. ಹೀಗಾಗಿ ಅದು ಸಹಜವಾಗಿ ಸಾವನ್ನಪ್ಪಿದೆ ಎನ್ನಲಾಗಿದ್ದು, ಕಳೇಬರವನ್ನು ನೋಡಿದ ಕೆಲವರು ಅದು ಪ್ರಿನ್ಸ್‌ನದು ಎಂದು ಹೇಳಿದ್ದರು. 14 ವರ್ಷ ಪ್ರಾಯದ ಪ್ರಿನ್ಸ್‌ ಸಫಾರಿ  ಸಂದರ್ಭದಲ್ಲಿ ಬಹುತೇಕ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದ್ದ. ಇದುವರೆಗೆ ಒಂದು ಸಾರಿಯೂ ಪ್ರವಾಸಿಗರ ಮೇಲೆ ದಾಳಿ ನಡೆಸಿಲ್ಲ. ಇದೇ ಕಾರಣಕ್ಕೆ ಹುಲಿ ಪ್ರಿನ್ಸ್ ಪ್ರವಾಸಿಗರ ಅಚ್ಚುಮೆಚ್ಚಾಗಿದ್ದ.

ಅಂತೆಯೇ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಫೋಟೋಗಳನ್ನು ತೆಗೆಸಿಕೊಂಡ ವನ್ಯಮೃಗ ಎಂಬ ಕೀರ್ತಿಗೂ ಪ್ರಿನ್ಸ್ ಹುಲಿ ಪಾತ್ರವಾಗಿತ್ತು.

SCROLL FOR NEXT