ಮಂಗಳೂರು: 2008ರ ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣದೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಏಳು ಆರೋಪಿಗಳ ಪೈಕಿ ಮೂವರು ತಪ್ಪಿತಸ್ಥರು ಎಂದು ಸೋಮವಾರ ಮಂಗಳೂರು ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ ಇತರೆ ನಾಲ್ವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಆರೋಪಿ ರಿಯಾಜ್ ಮತ್ತು ಇಖ್ಬಾಲ್ ಭಟ್ಕಳ್ ಅವರೊಂದಿಗೆ ಸೈಯದ್ ಮಹಮ್ಮದ್ ನೌಶಾದ್, ಮೂಲ್ಕಿ ಹಳೆಯಂಗಡಿಯ ಅಹ್ಮದ್ ಬಾವಾ ಮತ್ತು ಫಕೀರ್ ಅಹ್ಮದ್ ಸಂಪರ್ಕ ಹೊಂದಿರುವುದು ಸಾಬೀತಾಗಿದ್ದು, ಈ ಮೂವರು ದೋಷಿಗಳೆಂದು ತೀರ್ಪು ನೀಡಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 12ಕ್ಕೆ ಕಾಯ್ದಿರಿಸಿದೆ.
ಇತರೆ ನಾಲ್ವರು ಆರೋಪಿಗಳಾದ ಶಬೀರ್ ಭಟ್ಕಳ, ಅಹ್ಮದ್ ಅಲಿ, ಜಾವೇದ್ ಅಲಿ ಹಾಗೂ ಉಮರ್ ರಫೀಕ್ ಅವರನ್ನು ಕೋರ್ಟ್ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ,
ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕ ಹೊಂದಿದ್ದು, ದೇಶದ ವಿವಿಧೆಡೆ ಬಾಂಬ್ ಸ್ಪೋಟಿಸಲು ಬಾಂಬ್ ಪೂರೈಸಿದ್ದೂ ಸೇರಿದಂತೆ ವಿವಿಧ ಆರೋಪಗಳಡಿ ಈ ಏಳು ಮಂದಿಯನ್ನು ಬಂಧಿಸಲಾಗಿತ್ತು.