ಉಡುಪಿ: ತನ್ನ ಪತ್ನಿಯನ್ನು ಚುಡಾಯಿಸಿದ ವ್ಯಕ್ತಿಗೆ ಧಳಿಸುವ ಮೂಲಕ ದಂಡ ನೀಡಿದ ಮಲ್ಪೆ ಪೊಲೀಸ್ ಪೇದೆಯನ್ನು ಅಮಾನತು ಗೊಳಿಸಲಾಗಿದೆ.
ಏ.5 ರಂದು ಪ್ರಕಾಶ್ ಅವರು ತಮ್ಮ ಗರ್ಭಿಣಿ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಚುಡಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕಾಶ್ ಅವರು ಇಬ್ಬರೂ ಥಳಿಸುವ ಮೂಲಕ ಶಿಕ್ಷೆ ನೀಡಿದ್ದರು. ಚುಡಾಯಿಸಿದ ಆಱೋಪಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾಲೀಕತ್ವದ ರಾಜ್ ಫಿಶ್ ಮಿಲ್'ನ ನೌಕರರಾಗಿದ್ದಾರೆ.
ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ಹಲ್ಲೆಗೊಳಗಾದ ಮಲ್ಪೆ ಫಿಶ್ ಮಿಲ್ ಉದ್ಯೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತಂತೆ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಹಲ್ಲೆಗೈದ ಪೊಲೀಸ್ ಪೇದೆ ಪ್ರಕಾಶ್ ರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ ಬಾಲಕೃಷ್ಣ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆಂದು ಹೇಳಲಾಗುತ್ತಿದೆ.
ಪ್ರಕರಣ ಕುರಿತು ಪೇದೆ ಪ್ರಕಾಶ್ ಅವರು ಬೆಂಗಳೂರಿನ ಅಧಿಕಾರಿಗಳಿಗೆ ವಿವರಣೆ ನೀಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಡಿಯೋದಲ್ಲಿರುವ ಪ್ರಕಾರ, ನಾನು ಮತ್ತು ಗರ್ಭಿಣಿ ಪತ್ನಿ ಔಷಧಿ ತರಲೆಂದು ಆಸ್ಪತ್ರೆಗೆ ಹೋಗಿ ಬರುತ್ತಿದ್ದೆವು. ಈ ವೇಲೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪತ್ನಿಯನ್ನು ಚುಡಾಯಿಸಿದರು. ಮತ್ತೆ ಮತ್ತೆ ಚುಡಾಯಿಸಿದಾಗ ಆಕ್ಷೇಪಿಸಿ ಕೈಯಿಂದ ಹಲ್ಲೆ ನಡೆಸಿದೆ. ಇದಾದ ಬಳಿಕ ಪತ್ನಿಯ ಮೂಲಕ ದೂರು ಕೊಡಿಸಿದ್ದೆ. ಆದರೆ, ಅಧಿಕಾರಿಗಳು ದೂರನ್ನು ಸ್ವೀಕರಿಸಲಿಲ್ಲ. ಚುಡಾಯಿಸಿದ್ದ ವ್ಯಕ್ತಿಗಳು ಸಚಿವರ ಫಿಶ್ ಮಿಲ್ ಕಂಪನಿಯ ನೌಕರರಂತೆ.
ಅವರು ಸಚಿವ ಮೇಲೆ ಒತ್ತಡ ತಂದು ಕೇಸು ದಾಖಲಿಸದಂತೆ ಮಾಡಿ ಅನಂತರ ನನ್ನನ್ನು ಮತ್ತು ಎಸ್ಐ ಅವರನ್ನು ಕಂಪನಿಗೆ ಕರೆಸಿಕೊಂಡು ಅಲ್ಲಿ ನೂರಾರು ನೌಕರರ ಸಮ್ಮುಖದಲ್ಲಿ ರಾಜಿಯಲ್ಲಿ ಇತ್ಯರ್ಥಪಡಿಸಲು ಒತ್ತಾಯ ಮಾಡಿದರು. ಎಸ್ಐ ಸೂಚನೆಯಂತೆ ಅದಕ್ಕೆ ಒಪ್ಪಿದ ಬಳಿಕ ನೌಕರರಿಗೆ ಚಿಕಿತ್ಸೆ ಕೊಡಿಸುವಂತೆ ಆಗ್ರಹಿಸಿದರು. ಎಲ್ಲವೂ ಆದ ಬಳಿಕ ಮೇಲಧಿಕಾರಿಗಳ ಸೂಚನೆಯಂತೆ ನನ್ನನ್ನು ಅಮಾನತು ಮಾಡಲಾಗಿದೆ ಎಂದು ಪ್ರಕಾಶ್ ಹೇಳಿಕೊಂಡಿದ್ದಾರೆ.