ರಾಜ್ಯ

ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ ಉತ್ಸವ

Sumana Upadhyaya
ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯುತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೈತ್ರ ಪೂರ್ಣಿಮೆಯ ದಿನವಾದ ಇಂದು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಮಧ್ಯರಾತ್ರಿ 1 ಗಂಟೆಗೆ ಈ ಉತ್ಸವ ಜರುಗಲಿದೆ. 
ಅರ್ಚಕ ಜ್ಞಾನೇಂದ್ರ ಬಿನ್‌ ಅರ್ಜುನಪ್ಪ ಅವರು ಈ ವರ್ಷ 7ನೇ ಬಾರಿ ಕರಗ ಹೊರಲಿದ್ದಾರೆ. ಕರಗದ ಕೇಂದ್ರಬಿಂದು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ 65 ಅಡಿ ಎತ್ತರದ ಬಿದಿರಿನ ಕಂಬದ ಮೇಲೆ ಧ್ವಜ ಹಾರಿಸುವ ಮೂಲಕ ಉತ್ಸವಕ್ಕೆ ಎರಡು ದಿನಗಳ ಹಿಂದೆ ಚಾಲನೆ ಸಿಕ್ಕಿದೆ. 
ಇಂದು ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಧಾರ್ಮಿಕ ವಿಧಿವಿಧಾನಗಳು, ರಥೋತ್ಸವ ಇರಲಿವೆ.
ಕರಗ ಹೊರುವ ಜ್ಞಾನೇಂದ್ರ ಅವರಿಗೆ ಇಂದು ಬೆಳಿಗ್ಗೆ ಅರಿಶಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ಕಬ್ಬನ್ ಉದ್ಯಾನದ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆ ಪೂಜೆ ನೆರವೇರಿಸಲಾಯಿತು. ಹಸಿ ಕರಗವನ್ನು ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಮಧ್ಯರಾತ್ರಿ 1 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ದ್ರೌಪದಿ­ದೇವಿಯ ಹೂವಿನ ಕರಗ ಹೊರಡಲಿದೆ. ಕತ್ತಿ ಹಿಡಿದ ವೀರಕುಮಾರರು ಸಾಥ್‌ ನೀಡಲಿದ್ದಾರೆ’  ಎಂದು ಕರಗ ಉತ್ಸವ ಸಮಿತಿಯ ಸದಸ್ಯ ಎಂ.ಕೆ.ಗುಣಶೇಖರ್‌ ತಿಳಿಸಿದ್ದಾರೆ.
ಕರಗವು ಹಲಸೂರು ಪೇಟೆಯ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಿ ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೃಷ್ಣರಾಜ ಮಾರುಕಟ್ಟೆ ಮೂಲಕ ಅಕ್ಕಿಪೇಟೆ, ಅರಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್‌ಪೇಟೆಗಳಲ್ಲಿ ಸಂಚರಿಸಿ ಕುಲ ಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ ನಾಳೆ ಸೂರ್ಯೋದಯದ ವೇಳೆಗೆ ದೇವಸ್ಥಾನ ಸೇರಲಿದೆ.
SCROLL FOR NEXT