ಬೆಂಗಳೂರು: ಇನ್ನು ಮುಂದೆ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಹಾಸ್ಟೆಲ್ ನಲ್ಲಿರುವವರು ರಾತ್ರಿ 8 ಗಂಟೆಯೊಳಗೆ ತಮ್ಮ ಕೊಠಡಿಗೆ ತಲುಪಬೇಕು.
ಹಿರಿಯ ವಿದ್ಯಾರ್ಥಿಗಳು ರಾತ್ರಿ ತಡವಾಗಿ ಹಾಸ್ಟೆಲ್ ಗೆ ಬಂದು ಗಲಾಟೆ ಮಾಡುತ್ತಾರೆ ಎಂದು ಕಿರಿಯ ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ವಿಶ್ವವಿದ್ಯಾಲಯದ ಅಧಿಕಾರಿಗಳು ಎಲ್ಲಾ ವಿಭಾಗಗಳ ಮುಖ್ಯಸ್ಥರೊಂದಿಗೆ ಮತ್ತು ಹಾಸ್ಟೆಲ್ ವಾರ್ಡನ್ ಗಳ ಜೊತೆ ಸಭೆ ನಡೆಸಿ ಹಾಸ್ಟೆಲ್ ಗೆ ಎಲ್ಲರೂ ರಾತ್ರಿ 8 ಗಂಟೆಯೊಳಗೆ ತಲುಪಬೇಕು ಎಂದು ಸಮಯ ನಿಗದಿಪಡಿಸಿದ್ದಾರೆ.
ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ, ಹೊಸ ಕಾಲಾವಧಿ ಮೇ ತಿಂಗಳಿನಿಂದ ಜಾರಿಗೆ ಬರಲಿದ್ದು 8 ಗಂಟೆಯಿಂದ ನಂತರ ಬಂದರೆ ಹಾಸ್ಟೆಲ್ ನ ಒಳಗೆ ಬಿಡುವುದಿಲ್ಲ ಇಲ್ಲವೇ ದಂಡ ಕಟ್ಟಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ನಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಪ್ರವೇಶಾತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ರಾತ್ರಿ 8 ಗಂಟೆಯೊಳಗೆ ತಲುಪುವುದಾಗಿ ಬರೆದು ಕೊಡಬೇಕು. ಅದಕ್ಕೆ ಪೋಷಕರು ಸಹಿ ಹಾಕಬೇಕು.
ಈ ಬಗ್ಗೆ ಮಾತನಾಡಿದ ವಿಶ್ವವಿದ್ಯಾಲಯದ ಪ್ರಭಾರ ಉಪ ಕುಲಪತಿ ಪ್ರೊ. ಮುನಿರಾಜು, ಹಾಸ್ಟೆಲ್ ನ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿದ್ದೆವು. ಅಲ್ಲಿ ಈ ನಿರ್ಧಾರ ತೆಗೆದುಕೊಂಡೆವು. ವಿದ್ಯಾರ್ಥಿಗಳಿಗೆ ಅವಶ್ಯಕತೆಯಿದ್ದರೆ ಗ್ರಂಥಾಲಯವನ್ನು ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತೇವೆ.
ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ವಿದ್ಯಾರ್ಥಿಗಳೆಲ್ಲರೂ ರಾತ್ರಿ 8 ಗಂಟೆಯೊಳಗೆ ಹಾಸ್ಟೆಲ್ ಗೆ ತಲುಪಬೇಕಾಗಿದ್ದು, 10 ಗಂಟೆಯೊಳಗೆ ಊಟ ಮುಗಿಸಬೇಕು. ಊಟದ ಅವಧಿ ಮುಗಿದ ನಂತರ ಬಂದವರಿಗೆ ಊಟ ನೀಡಲಾಗುವುದಿಲ್ಲ. ಹಾಸ್ಟೆಲ್ ನಲ್ಲಿ ಕೆಲವು ಶಿಸ್ತು ನಿಯಮಗಳನ್ನು ಅಳವಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಮುನಿರಾಜು ಹೇಳಿದರು.