ಬೆಂಗಳೂರು:ಇತ್ತೀಚೆಗೆ ಲಾರಿ ಮತ್ತು ಟ್ರಕ್ ಮಾಲೀಕರ ಮುಷ್ಕರ, ತೀವ್ರ ಬರಗಾಲಗಳಿಂದಾಗಿ ತೆಂಗಿನಕಾಯಿ ಬೆಲೆ ಗಗನಕ್ಕೇರಿದ್ದು ಉತ್ಪಾದನೆ ಕೂಡ ಈ ವರ್ಷ ಕುಂಠಿತಗೊಂಡಿದೆ. ಕಳೆದ 10 ದಿನಗಳಲ್ಲಿ ದೊಡ್ಡ ಗಾತ್ರದ ತೆಂಗಿನಕಾಯಿ ಒಂದರ ಬೆಲೆ 30ರಿಂದ 35 ರೂಪಾಯಿಗಳಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಭಾರತದಲ್ಲಿ ಕೇರಳ ಮತ್ತು ತಮಿಳು ನಾಡು ನಂತರ ಕರ್ನಾಟಕ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯ. ವಾರ್ಷಿಕವಾಗಿ 5.49 ಹೆಕ್ಟೇರ್ ಪ್ರದೇಶದಲ್ಲಿ 512.88 ಕೋಟಿ ತೆಂಗಿನಕಾಯಿ ಉತ್ಪಾದನೆಯಾಗುತ್ತದೆ. ತುಮಕೂರು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟಾಗಿ ಶೇಕಡಾ 85ಕ್ಕಿಂತ ಹೆಚ್ಚು ತೆಂಗಿನಕಾಯಿಗಳು ಬೆಳೆಯುತ್ತವೆ.
ಹಾಸನದ ಚೆನ್ನರಾಯಪಟ್ಟಣದ ತೆಂಗು ಬೆಳೆಗಾರ ರಘು ಹೆಚ್ ಬೆಂಗಳೂರಿಗೆ ಸಗಟು ಬೆಲೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡುತ್ತಾರೆ. ಸರಾಸರಿ ಪ್ರತಿ ಮರದಲ್ಲಿ ವರ್ಷಕ್ಕೆ ಸರಾಸರಿ 200 ತೆಂಗಿನಕಾಯಿ ಫಸಲು ಬರುತ್ತದೆ. ಅದೀಗ 60ಕ್ಕಿಳಿದಿದೆ. ಹೀಗಿರುವಾಗ ತೆಂಗಿನ ಬೆಲೆ ಸಹಜವಾಗಿ ಏರಿಕೆಯಾಗುತ್ತದೆ. ಆದರೆ ತೆಂಗಿನ ರುಚಿ ಮತ್ತು ಗಾತ್ರ ಬದಲಾಗಿಲ್ಲ. ತೆಂಗಿನಕಾಯಿಯೊಂದಕ್ಕೆ ಮುಂದಿನ ದಿನಗಳಲ್ಲಿ 40ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಅವರು.
ಬೆಂಗಳೂರಿನ ವಿಜಯನಗರದಲ್ಲಿ ತೆಂಗಿಕಾಯಿ ಮಾರಾಟ ಮಾಡುತ್ತಿರುವ ಮಂಜುನಾಥ ಸ್ವಾಮಿ, ಕೆಲ ದಿನಗಳ ಹಿಂದೆ 30ರೂಪಾಯಿ ಇದ್ದ ತೆಂಗಿನ ಕಾಯಿ ಬೆಲೆ ಈಗ 35ರೂಪಾಯಿಗೆ ಏರಿಕೆಯಾಗಿದೆ ಎನ್ನುತ್ತಾರೆ.
ತೆಂಗಿನಕಾಯಿ ಬೆಲೆ ಏರಿಕೆ ಶುಭ ಕಾರ್ಯಕ್ಕೆ ಕೊಳ್ಳುವ ತಾಂಬೂಲದ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾರೆ ಎಸ್ಎಲ್ ವಿಯ ಶ್ರೀಧರ್ ಭಟ್. ತೆಂಗಿನಕಾಯಿಗೆ ಬದಲಾಗಿ ನಾವು ಮೂಸಂಬಿ ಮತ್ತು ಮಾವಿನ ಹಣ್ಣು ಕೊಡುತ್ತೇವೆ ಎನ್ನುತ್ತಾರೆ. ತೆಂಗಿನಕಾಯಿ, ಹಾಲು, ಮೊಸರು, ತುಪ್ಪದ ಬೆಲೆ ಹೆಚ್ಚಳದಿಂದ ಹೊಟೇಲ್ ಗಳ ಊಟ, ತಿಂಡಿ ಬೆಲೆಯಲ್ಲಿ ಕೂಡ ಹೆಚ್ಚಳ ಮಾಡಬೇಕಾಗುತ್ತದೆ ಎನ್ನುತ್ತಾರೆ ಬೃಹತ್ ಬೆಂಗಳೂರು ಹೊಟೇಲ್ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್.
ಕರ್ನಾಟಕ ತೆಂಗು ನಿಗಮದ ಉಪ ನಿರ್ದೇಶಕ ಹೇಮಚಂದ್ರ, ರಾಜ್ಯದಲ್ಲಿ ಈ ವರ್ಷ ಶೇಕಡಾ 60ರಷ್ಟು ಕಡಿಮೆ ತೆಂಗಿನಕಾಯಿ ಬೆಳೆ ಇಳುವರಿ ಬಂದಿದೆ. ಪ್ರತಿ ಮರಕ್ಕೆ 50ರಿಂದ 75 ಲೀಟರ್ ನೀರು ಬೇಕು. ಬೆಳೆಗಾರರು ನೆರೆ ನೀರಾವರಿ ವ್ಯವಸ್ಥೆಯನ್ನು ಅಳವಡಿಸುತ್ತಾರೆ. ನಾವು ತೋಟಗಾರಿಕಾ ಇಲಾಖೆ ಜೊತೆ ಸೇರಿ ರೈತರಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡುತ್ತೇವೆ. ತೆಂಗಿನಕಾಯಿ ಬೆಲೆ ಇಳಿಯಬೇಕಾದರೆ ಜುಲೈವರೆಗೆ ಕಾಯಬೇಕು ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos