ಬೆಂಗಳೂರು: ಒಕ್ಕಲಿಗ ಸಂಘ ಡೆಂಟಲ್ ಕಾಲೇಜಿನಲ್ಲಿ ಡೆಂಟಲ್ ಪದವಿ ಕೋರ್ಸ್ ಪರೀಕ್ಷೆ ಬರೆಯಲು ಅನರ್ಹರಾದ ವಿದ್ಯಾರ್ಥಿಗಳ ಸಂಖ್ಯೆ 40ಕ್ಕೇರಿದೆ. ಸುಮಾರು 20 ವಿದೇಶಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನರ್ಹರು ಎಂದು ಘೋಷಿಸಲಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕಾಲೇಜಿನ ಪ್ರವೇಶಾತಿ ಮಿತಿಗಿಂತ ಹೆಚ್ಚು 40 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ವಿದ್ಯಾರ್ಥಿಗಳನ್ನು ತೆಗೆದುಹಾಕುವಂತೆ ಕೂಡ ವಿಶ್ವವಿದ್ಯಾಲಯ ಕಾಲೇಜಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಕಳೆದ ವರ್ಷ ಮೇ ತಿಂಗಳಿನಲ್ಲಿ ಸೂಚನೆ ಕಳುಹಿಸಲಾಗಿದೆ.
ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಪ್ರತಿ ವಿಭಾಗಕ್ಕೆ 60 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಸಂಸ್ಥೆಗೆ ಅವಕಾಶ ನೀಡಲಾಗಿತ್ತು. ಆದರೆ ಆ ಸಂಸ್ಥೆ 40 ಹೆಚ್ಚು ವಿದ್ಯಾರ್ಥಿಗಳನ್ನು ಎನ್ಆರ್ ಐ ಮತ್ತು ಮ್ಯಾನೇಜ್ ಮೆಂಟ್ ಕೋಟಾದಡಿ ದಾಖಲು ಮಾಡಿಕೊಂಡಿದೆ ಎಂದರು.
ಈ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪ್ರವೇಶ ಪಡೆಯದಿದ್ದರಿಂದ ಮತ್ತು ನೀಟ್ ರ್ಯಾಂಕ್ ಕಾರ್ಡುಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡದಿರುವುದರಿಂದ 40 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎಂದರು.
ವಿವಾದ ಪ್ರಸ್ತುತ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೆ ಒಕ್ಕಲಿಗ ಸಂಘ ನಾವು ಪಾವತಿಸಿದ ಶುಲ್ಕವನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್, ಕಾಲೇಜು ಆಡಳಿತ ಮಂಡಳಿ ನಮ್ಮನ್ನು ಸಂಪರ್ಕಿಸಿದ್ದಾರೆ. ಅಕ್ರಮ ಪ್ರವೇಶಾತಿಯಾಗಿರುವುದರಿಂದ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ವಿದ್ಯಾರ್ಥಿಗಳು ನಮ್ಮನ್ನು ಸಂಪರ್ಕಿಸಿದರೆ ಅವರು ಪಾವತಿಸಿದ ಶುಲ್ಕವನ್ನು ಹಿಂತಿರುಗಿಸುವಂತೆ ಒತ್ತಾಯಿಸಬಹುದು ಎಂದರು.
ಒಕ್ಕಲಿಗ ಸಂಘ ಈ ಕುರಿತು ಇದೇ ಶನಿವಾರ ಸಭೆ ಕರೆದಿದೆ.