ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕಿನಲ್ಲಿ ಸಾವಿಗೀಡಾದ ಬಾಲಕ ದೊಡ್ಡಬಸಪ್ಪ ಅವರ ಪೋಷಕರು ಮತ್ತು ಬಂಧುಗಳು
ಕೊಪ್ಪಳ: ಜಿಲ್ಲೆಯ ಕುಷ್ಠಗಿ ತಾಲ್ಲೂಕಿನ ಜುಮ್ಮಲಾಪುರ್ ಗ್ರಾಮ ಪಂಚಾಯತ್ ನ ಸಾಸ್ವಿಹಾಲ್ ಗ್ರಾಮದ 13 ವರ್ಷದ ಬಾಲಕ ನಿನ್ನೆ ತೀವ್ರ ಬಿಸಿಲಿಗೆ ಮೃತಪಟ್ಟಿದ್ದಾನೆ. ಮೊನ್ನೆ ಏಪ್ರಿಲ್ 1ರಿಂದ ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿಲ್ಲ.
ನಿನ್ನೆ ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಬಂದ ದೊಡ್ಡಬಸಪ್ಪ ತನ್ನ ತವರ ಚಾವಣಿ ಮನೆಯಲ್ಲಿ ಮಧ್ಯಾಹ್ನ ಕಿರು ನಿದ್ದೆ ಮಾಡಿದ್ದ. ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿದ್ದ ದೊಡ್ಡಬಸಪ್ಪನನ್ನು ನಿನ್ನೆ ರಾತ್ರಿ ತಾವರೆಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಕುಷ್ಠಗಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಕುಷ್ಠಗಿಗೆ ಕರೆದೊಯ್ಯುವಾಗಲೇ ಮಾರ್ಗ ಮಧ್ಯೆ ಮೃತಪಟ್ಟನು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ, ಅಧಿಕ ತಾಪಮಾನವನ್ನು ತಡೆಯಲು ಆರೋಗ್ಯ ಇಲಾಖೆ ಇತ್ತೀಚೆಗೆ ಕ್ರಮ ಕೈಗೊಳ್ಳುವಂತೆ ಜನರಿಗೆ ಮನವಿ ಮಾಡಿತ್ತು. ತಾಪಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕವಾಗುವ ಸಾಧ್ಯತೆಯಿದ್ದು ತೀವ್ರ ಬರಗಾಲ ಉಂಟಾಗುವ ಲಕ್ಷಣವಿದೆ ಎಂದು ಹೇಳಿದರು.