ಬೆಂಗಳೂರು: ದಿನದಿಂದ ದಿನಕ್ಕೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಮೀಸಲಿಡಬೇಕು ಎಂಬ ಬೇಡಿಕೆಯೂ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮೆಟ್ರೋ ರೈಲು ನಿಗಮ ಮುಂದಿನ ವರ್ಷದಿಂದ ಮಹಿಳೆಯರಿಗೆ ವಿಶೇಷ ಬೋಗಿ ಒದಗಿಸಲು ಮುಂದಾಗಿದೆ.
ಬಿಎಂಆರ್ ಸಿಎಲ್ ಇದುವರೆಗೂ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಗಳನ್ನು ಮೀಸಲಿಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದರೂ ಮಹಿಳೆಯರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2018ರ ಜನವರಿಯಿಂದ ಮಹಿಳೆಯರಿಗೆ ಒಂದು ಬೋಗಿ ಮೀಸಲಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಪಿಗೆ ರಸ್ತೆಯಿಂದ ಪುಟ್ಟೇನಹಳ್ಳಿವರೆಗೆ ನಮ್ಮ ಮೆಟ್ರೋ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಮೊದಲ ಹಂತದ ನಮ್ಮ ಮೆಟ್ರೋ ರೈಲು ಸಂಪೂರ್ಣ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದ್ದು. ಈ ಕಾಮಗಾರಿ ಪೂರ್ಣಗೊಂಡ ನಂತರ ಸುಮಾರು 150 ಹೊಸ ಕೋಚ್ ಗಳು ಬರಲಿವೆ. ಹೊಸ ಬೋಗಿ ಬಂದ ನಂತರ ಬೋಗಿ ಸಂಖ್ಯೆಯನ್ನು ಡಬಲ್ ಮಾಡಲಾಗುವುದು ಹಾಗೂ ಪೀಕ್ ಸಮಯದಲ್ಲಿ ಮೂರು ನಿಮಿಷಕ್ಕೊಂದು ರೈಲು ಓಡಿಸುವ ಉದ್ದೇಶ ಇದೆ ಎಂದು ಬಿಎಂಆರ್ ಸಿಎಲ್ ಜನರಲ್ ಮ್ಯಾನೇಜರ್ ಹಾಗೂ ವಕ್ತಾರ ವಸಂತ್ ರಾವ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಹಿಳೆಯರಿಗೆ ಆಸನಗಳನ್ನು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಮನಸ್ಸು ಮಾಡಬೇಕು. ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಓಡಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಿರುವ ಬೋಗಿಗಳಿಗಿಂತ ಬೋಗಿಗಳ ಸಂಖ್ಯೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಬಹುದು. ಆದರೆ 2018ರ ವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿಗಳು ಹಾಗೂ ಮಹಿಳಾ ಮೀಸಲು ಆಸನಗಳಿದ್ದು, ಅದೇ ರೀತಿ ನಮ್ಮ ಮೆಟ್ರೋದಲ್ಲೂ ವ್ಯವಸ್ಥೆಯನ್ನು ಅಳವಡಿಸಬೇಕು ಎನ್ನುವ ಆಗ್ರಹ ನಿತ್ಯ ಸಂಚರಿಸುತ್ತಿರುವ ಮಹಿಳಾ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.