ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಗಾಗಿ ಪ್ರಾರಂಭಿಸಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ, ಕೇಂದ್ರ ವಲಯ ವ್ಯಾಪ್ತಿಗಾಗಿ ಐಜಿ ಕಚೇರಿಯಲ್ಲಿ ನೂತನ ಸೈಬರ್ ಠಾಣೆಯನ್ನು ಗೃಹ ಸಚಿವ ಪರಮೇಶ್ವರ್ ಉದ್ಘಾಟಿಸಿದರು.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳು ಈ ಠಾಣೆಯ ವ್ಯಾಪ್ತಿಗೆ ಬರುತ್ತವೆ. 5 ಜಲ್ಲೆಗಳ ಯಾವುದೇ ಠಾಣೆಯಲ್ಲಿ ಸೈಬರ್ ಕ್ರೈಂ ಸಂಬಂಧಿತ ದೂರು ದಾಖಲಾದರೂ ಅದು ಹೊಸ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆಯಾಗಲಿದೆ.ರಾಜ್ಯದಲ್ಲಿ ಪ್ರಾರಂಭಿಸಿರುವ 7ನೇ ಸೈಬರ್ ಕ್ರೈಂ ಪೊಲೀಸ್ ಠಾಣೆ ಎಂದು ಪರಮೇಶ್ವರ್ ಹೇಳಿದರು.
ನೋಟು ಬದಲಾವಣೆ ಪ್ರಕರಣದಲ್ಲಿ ಸದ್ಯ ನಾಪತ್ತೆಯಾಗಿರುವ ಬಾಂಬ್ ನಾಗನ ಪ್ರಕರಣದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಆತನ ವಿರುದ್ಧದ ತನಿಖೆಗೆ ಯಾವುದೇ ಒತ್ತಡವಿಲ್ಲ. ಬಾಂಬ್ ನಾಗನಿಗೆ ಇಲಾಖೆಯಲ್ಲಿ ಯಾರೇ ಸಹಕರಿಸಿದ್ದರೂ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಎಚ್,ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಇನ್ನೂ ವರದಿ ಸಲ್ಲಿಸಬೇಕಿದೆ ಎಂದು ಹೇಳಿರುವ ಪರಮೇಶ್ವರ್, ಸಿಐಡಿ ಅಧಿಕಾರಿಗಳು ವರದಿ ಸರ್ಕಾರಕ್ಕೆ ಸಲ್ಲಿಸಿದ ನಂತರವಷ್ಟೇ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ. ಎಚ್.ವೈ ಮೇಟಿ ವಿರುದ್ಧ ಯಾರು ದೂರು ದಾಖಲಿಸದ ಹಿನ್ನೆಲೆಯಲ್ಲಿ ಸಿಐಡಿ ಕ್ಲೀನ್ ಚಿಟ್ ನೀಡಲಿದ್ದಾರೆ ಎನ್ನಲಾಗಿದೆ.