ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸಿವಿಕ್ ಸಂಸ್ಥೆ (ಬೆಂಗಳೂರಿನ ನಾಗರಿಕ ಸೇವಾ ಸಂಸ್ಥೆ) ಗೆ ಛೀಮಾರಿ ಹಾಕಿದ ನಂತರ ಎಚ್ಚೆತ್ತುಕೊಂಡಿರುವ ನಾಗರಿಕ ಸಂಸ್ಥೆಗಳು ಕೆರೆ ಸ್ವಚ್ಛತಾ ಯೋಜನೆಗೆ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಪ್ರತಿಯೊಂದು ಸಂಸ್ಥೆಯೂ ಒಂದೊಂದು ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ನಗರಾಭಿವೃದ್ಧಿ ಇಲಾಖೆ(ಯುಡಿಡಿ) ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಬಿಬಿಎಂಪಿ, ಬಿಡಿಎ ಸೇರಿದಂತೆ ವಿವಿಧ ನಾಗರಿಕ ಸೇವಾ ಸಂಸ್ಥೆ(ಸಿವಿಕ್ ಸಂಸ್ಥೆ) ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕಾರ್ಯಸೂಚಿಯನ್ನು ಅಂಗೀಕರಿಸಲಾಗಿದೆ.
ಮುಂದಿನ ವಾರದಿಂದ ಬೆಳ್ಳಂದೂರು ಕೆರೆ ಸ್ವಚ್ಛತಾ ಕಾಮಗಾರಿ ಪ್ರಾರಂಭವಾಗಲಿದ್ದು, ಬಿಡಿಎ ಕೆರೆಯಲ್ಲಿರುವ ಅವಶೇಷಗಳನ್ನು ಹಾಗೂ ತ್ಯಾಜ್ಯಗಳನ್ನು ತೆಗೆಸಲಿದೆ. ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ನಿಗಾ ವಹಿಸಲು ಸಿಸಿಟಿವಿಯನ್ನು ಅಳವಡಿಸಿ ಅದನ್ನು ನಿರ್ವಹಿಸುವ ಕೆಲಸ ಬಿಬಿಎಂಪಿಯ ಹೆಗಲೇರಿದೆ. ಇನ್ನು ಕೆಎಸ್ ಪಿಸಿಬಿ ಕೆರೆ ಬಳಿ ಇರುವ ಕೈಗಾರಿಕೆಗಳನ್ನು ಮುಚ್ಚಿಸಿ ಕೆರೆಯೊಳಗೆ ಕೈಗಾರಿಕೆಗಳ ತ್ಯಾಜ್ಯ ಹರಿಯದಂತೆ ನಿಗಾ ವಹಿಸುವ ಜವಾಬ್ದಾರಿ ಪಡೆದಿದೆ.
ಸಭೆಯ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಮಹೇಂದ್ರ ಜೈನ್, ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸಿವಿಕ್ ಸಂಸ್ಥೆಗಳ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಆದೇಶದ ಪ್ರತಿ ನಮಗೆ ಇನ್ನಷ್ಟೇ ಬರಬೇಕಿದ್ದರೂ ಕೆರೆಯನ್ನು ಸ್ವಚ್ಛಗೊಳಿಸುವುದಕ್ಕೆ ಪ್ರತಿಯೊಂದು ಸಂಸ್ಥೆಗೂ ಒಂದೊಂದು ಜವಾಬ್ದಾರಿಯನ್ನು ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.