ಬೆಂಗಳೂರು: ಗಿರಿನಗರ ಠಾಣಾ ಸರಹದ್ದಿನಲ್ಲಿ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಶವ ನೆರೆಮನೆಯಾತನ ಮನೆಯಲ್ಲಿ ದೊರಕಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ವೀರಭದ್ರನಗರದ ಹೀರಣ್ಣಗುಡ್ಡೆ ನಿವಾಸಿಯಾಗಿರುವ 6 ವರ್ಷದ ಬಾಲಕಿ ಮೃತ ದುರ್ದೈವಿ. ಬಾಲಕಿಯ ನೆರೆಮನೆಯ ನಿವಾಸಿ ಅನಿಲ್ ಎಂಬಾತನ ಮನೆಯ ಪೆಟ್ಟಿಗೆಯೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಅನಿಲ್ ನಾಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆರೋಪಿಯ ಬಂಧನಕ್ಕೆ ಪೊಲೀಸರು 2 ವಿಶೇಷ ತಂಡಗಳನ್ನು ರಚಿಸಿದ್ದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಒಂದು ತಂಡ ಕಲಬುರಗಿಗೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ 1ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಇವರ ಮನೆಯ ಪಕ್ಕದಲ್ಲಿಯೇ ಕಲಬುರದಿ ಮೂಲಕ ಅನಿಲ್ ಎಂಬಾತ ಕಳೆದ 7 ವರ್ಷಗಳಿಂದಲೂ ಬಾಡಿಗೆಗೆ ವಾಸವಿದ್ದ. ಟ್ರ್ಯಾಕ್ಟರ ಚಾಲಕನಾಗಿರುವ ಅನಿಲ್'ಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬೇಸಿಗೆ ಹಿನ್ನಲೆಯಲ್ಲಿ ಅನಿಲ್ ಪತ್ನಿ ಮತ್ತು ಇಬ್ಬರು ಮಕ್ಕಳು ಕಲಬುರಗಿಗೆ ತೆರಳಿದ್ದರು. ಆಗ ಮನೆಯಲ್ಲಿ ಅನಿಲ್ ಮಾತ್ರ ಇದ್ದ. ಕಳೆದ ನಾಲ್ಕು ದಿನಗಳ ಹಿಂದೆ ಏ.19 ರಂದು ಸಂಜೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದಳು.
ಬಾಲಕಿಯ ಪೋಷಕರು ತಡರಾತ್ರಿವರೆಗೆ ಸಂಬಂಧಿಕರು ಮತ್ತು ಸ್ನೇಹಿತರ ಮನೆ ಸೇರಿದಂತೆ ಎಲ್ಲಡೆ ಹುಡುಕಾಟ ನಡೆಸಿದ್ದರು. ಮಗಳು ಪತ್ತೆಯಾಗದ ಹಿನ್ನಲೆಯಲ್ಲಿ ಗಿರಿವಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕಱಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನಡೆಸಿದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ.
ಭಾನುವಾರ ಸಂಜೆ ನೆರೆಮನೆಯಾತ ಪ್ರಕಾಶ್ ಎಂಬುವವರು ಅನಿಲ್'ಗೆ ಕರೆ ಮಾಡಿದ್ದಾರೆ. ಮನೆಯ ಲೈಟ್ ಗಳು ಆನ್ ನಲ್ಲಿದೆ ಎಂದು ತಿಳಿಸಿದ್ದಾರೆ. ಲೈಟ್ ಆಫ್ ಮಾಡುವುದು ಮರೆತಿದ್ದೆ. ಪ್ರಸ್ತುತ ನಾನು ಕಲಬುರಗಿಯಲ್ಲಿದ್ದು. ನೀವೇ ಲೈಟ್ ಗಳನ್ನು ಆಫ್ ಮಾಡಿ ಎಂದು ಹೇಳಿ ಅನಿಲ್ ಕೂಡಲೇ ಫೋನ್ ಕಟ್ ಮಾಡಿದ್ದಾನೆ.
ನಂತರ ಪ್ರಕಾಶ್ ಹಾಗೂ ಅವರ ಪತ್ನಿ ಮಂಜುಳಾ ಇಬ್ಬರು ಐರನ್ ರಾಡ್ ಬಳಸಿಕೊಂಡು ಲೈಟ್ ಆಫ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮನೆಯಿಂದ ಕೆಟ್ಟ ದುರ್ವಾಸನೆ ಬಂದಿದೆ. ಕೂಡಲೇ ಇತರೆ ನೆರೆಮನೆಯವರಿಗೆ ಮಾಹಿತಿ ನೀಡಿದ ಪ್ರಕಾಶ್ ಅವರು ಮನೆಯ ಬಾಗಿಲನ್ನು ಹೊಡೆದಿದ್ದಾರೆ. ಈ ವೇಳೆ ಮನೆಯಲ್ಲಿ ಬಾಕ್ಸ್ ವೊಂದು ಪತ್ತೆಯಾಗಿದೆ. ಪೆಟ್ಟಿಗೆಯ ಹೊರ ಭಾಗದಲ್ಲಿ ಬಾಲಕಿಯ ಕೈ ಸಿಕ್ಕಿಹಾಕಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಪ್ರಕಾಶ್ ಅವರು ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಗಿರಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕಿಯ ಶವ ಕಂಡ ಕೂಲೇ ಆಕೆಯ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕಿಯ ಹತ್ಯೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ನಂತರ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಲುವಾಗಿ ಆಕೆಯನ್ನು ಸುಡಲಾಗಿದೆ. ಈಗಾಗಲೇ ಆರೋಪಿ ಬಂಧನಕ್ಕಾಗಿ ತಂಡವನ್ನು ರಚಿಸಲಾಗಿದೆ. ಪ್ರಕರಣದಲ್ಲಿ ಇನ್ನಿತರೆ ಆರೋಪಿಗಳು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರಸ್ತುತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.