ರಾಜ್ಯ

ಕಾವೇರಿಗೆ ಕಣ್ಣೀರ ತರ್ಪಣ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Shilpa D
ಅಥಣಿ: ಬೆಳಗಾವಿ ತಾಲೂಕು ಅಥಣಿಯ ಝುಂಝರವಾಡ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕಿ ಕಾವೇರಿ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು. ಬಾಲಕಿಯ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ಜನರು ಆಗಮಿಸಿ ಕಣ್ಣೀರ ವಿದಾಯ ಹೇಳಿದರು.
ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿತ್ತು, ದುರಂತ ನಡೆದ ಸ್ಥಳಕ್ಕೆ ವೈದ್ಯರ ತಂಡ ಆಗಮಿಸಿತ್ತು. ಅಂತ್ಯ ಸಂಸ್ಕಾರಕ್ಕೆ ಬರುವ ಕಾವೇರಿ ಕುಟುಂಬಸ್ಥರ ಹಾಗೂ ಸಂಬಂಧಿಕರಿಗೆ ಜಿಲ್ಲಾಡಳಿತ ಸಾರಿಗೆ ಸೌಲಭ್ಯ ಒದಗಿಸಿತ್ತು, 
ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಕಾವೇರಿ ಪೋಷಕರನ್ನು ಆ್ಯಂಬುಲೆನ್ಸ್ ನಲ್ಲಿ  ಅಂತಿಮ ಸಂಸ್ಕಾರ ನಡೆಯುವ ಸ್ಥಳಕ್ಕೆ ಕರೆದು ತರಲಾಗಿತ್ತು. ನಂತರ ಕಾವೇರಿ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಥಣಿ ಸ್ರಾಕರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾವೇರಿ ಬಾವಿಗೆ ಬಿದ್ದ ಮೊದಲ ದಿನವೇ ಸಾವನ್ನಪ್ಪಿರಬಹುದು ಎಂದು ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ರಕ್ಷಣಾ ತಂಡ ಬರುವ ಮುನ್ನವೇ ಕಾವೇರಿ ತಾಯಿ ಕೊಳವೆಬಾವಿಯೊಳಗೆ ಸೀರೆ  ಮತ್ತು ಹಗ್ಗ ಬಿಟ್ಟಿದ್ದರು, ಆದರೆ ಬಾಲಕಿ ಯಾವುದನ್ನು ಹಿಡಿದುಕೊಂಡಿರಲಿಲ್ಲ, ಆದರೆ ಕಾವೇರಿ ಯಾವ ಸಮಯದಲ್ಲಿ ಕೊನೆಯುಸಿರೆಳೆದಿದ್ದಳು ಎಂಬ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲಷ್ಟೇ ತಿಳಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಕಾವೇರಿ ಬಿದ್ದಿದ್ದ ಕೊಳವೆ ಬಾವಿ ಸಮೀಪದಿಂದ ವಾಸನೆ ಬರುತ್ತಿತ್ತು. ಆದಾಗಲೇ ರಕ್ಷಣಾ ತಂಡಕ್ಕೆ ಕಾವೇರಿ ಬದುಕಿರುವ  ಬಗ್ಗೆ ಸಂಶಯ ಮೂಡಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಲಕಿ ಉಸಿರಾಡಲು ಅಲ್ಲಿ ಸ್ಥಳವೇ ಇರಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಕಾವೇರಿ ಶವವನ್ನು ಹೊರತೆಗೆದ ರಕ್ಷಣಾ ತಂಡಕ್ಕೆ ಹೇಳು ಮಾತುಗಳೇ ಇರಲಿಲ್ಲ, ವಿ ಆರ್ ಸಾರಿ ಎಂದು ಹೇಳಿ ಮೃತದೇಹವನ್ನು ರಕ್ಷಣಾ ತಂಡ ಹಸ್ತಾಂತರಿಸಿತು. ನಾವು ನಮ್ಮ ಕೈಲಾದ ಮಟ್ಟಿಗೆ ಕೆಲಸ ಮಾಡಿದ್ದೇವೆ, ಸ್ಥಳೀಯ ಆಡಳಿತ ಪ್ರತಿ ಕ್ಷಣದಲ್ಲೂ ನಮಗೆ ಸಹಾಯ ಮಾಡಿತು, ಆದರೆ ಕೆಲವೊಮ್ಮೆ ನಾವು ಅಸಹಾಯಕರಾಗಿಬಿಡುತ್ತೇವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
SCROLL FOR NEXT