ರಾಜ್ಯ

900 ಎಕರೆ ವಿಸ್ತೀರ್ಣದ ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಕೇವಲ 2 ಕಳೆ ತೆಗೆಯುವ ಯಂತ್ರ!

Sumana Upadhyaya
ಬೆಂಗಳೂರು: ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಇನ್ನು ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಬೇಕು. ಆದರೆ ಕೆರೆಯ ಸುತ್ತಮುತ್ತಲಿನ ಅವಶೇಷಗಳು, ಕಸಕಡ್ಡಿಗಳು, ಮಣ್ಣಿನ ರಾಶಿಯನ್ನು ತೆಗೆಯಲು ಕೇವಲ ಎರಡು ಭೂಮಿಯನ್ನು ಸ್ವಚ್ಛಗೊಳಿಸುವ ಯಂತ್ರವನ್ನು ನಿಯೋಜಿಸಲಾಗಿದೆ. 
ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದ್ದಾಗ, ಕೆಲಸ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಯಂತ್ರದಲ್ಲಿ ಇಂಧನ ಖಾಲಿಯಾಗಿತ್ತು.  ಇದು ಕೇವಲ ಕಣ್ಣೊರೆಸುವ ತಂತ್ರ.ಸುಮಾರು 900 ಎಕರೆ ವಿಸ್ತಾರದ ಕೆರೆಯನ್ನು ಕೇವಲ ಎರಡು ಯಂತ್ರಗಳ ಸಹಾಯದಿಂದ ಸ್ವಚ್ಛಗೊಳಿಸುವುದು ಹೇಗೆ ಎಂದು ಕೇಳುತ್ತಾರೆ ಸುತ್ತಮುತ್ತಲಿನ ನಿವಾಸಿಗಳು.
ಮೊನ್ನೆ ಸೋಮವಾರ ಕೆರೆಯಿಂದ ಹೂಳೆತ್ತುವ ಕಾರ್ಯ ಆರಂಭಗೊಂಡಿತ್ತು. ನಿನ್ನೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಕೆಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ಇದುವರೆಗೆ ಯಾವ ಕೆಲಸವೂ ಆಗಿಲ್ಲ.
ಬೆಳ್ಳಂದೂರಿನ ನಿವಾಸಿ ಸೊನಾಲಿ ಸಿಂಗ್, ನಿನ್ನೆ ಜೆಸಿಬಿ ಯಂತ್ರದಿಂದ ಯಾವುದೇ ಕೆಲಸವಾಗಿಲ್ಲ. ಮಾಧ್ಯಮಗಳಿಗೆ ಮತ್ತು ಹಸಿರು ಪ್ರಾಧಿಕಾರಕ್ಕೆ ಕಣ್ಣೊರೆಸಲು ಇಟ್ಟಿದ್ದಾರಷ್ಟೆ ಎನ್ನುತ್ತಾರೆ.
ಮತ್ತೊಬ್ಬ ಮಹಿಳೆ ಮೊನಾಲಿ ಜೆಆರ್ ಮಾತನಾಡಿ, ಕಳೆದೆರಡು ದಿನಗಳಿಂದ ಯಾವುದೇ ಮಹತ್ವದ ಕೆಲಸಗಳು ನಡೆದಿಲ್ಲ. ಇನ್ನು 2 ವರ್ಷವಾದರೂ ಕೆಲಸ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸ ತಮಗಿಲ್ಲ ಎಂದರು.
ಬಿಡಿಎ ಅಧಿಕಾರಿಗಳನ್ನು ಕೇಳಿದರೆ, ಬುಧವಾರ ಕೆರೆಯ ಕಳೆಗಳನ್ನು ಕೀಳಲು ಟೆಂಡರ್ ಕರೆಯಲಾಗುವುದು. ಆದರೆ ಅಲ್ಲಿ ರಾಶಿ ಹಾಕಿರುವ ಮಣ್ಣನ್ನು ಮತ್ತು ಕಸಕಡ್ಡಿಗಳನ್ನು ತೆಗೆಯಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬುದಕ್ಕೆ ಉತ್ತರವಿಲ್ಲ.
ಬಿಡಿಎ ಮುಖ್ಯ ಎಂಜಿನಿಯರ್ ಪಿ.ಎನ್. ನಾಯಕ್ ಪತ್ರಿಕೆ ಜೊತೆ ಮಾತನಾಡಿ, ಬುಧವಾರ ಇನ್ನೊಂದು ಜೆಸಿಬಿ ಮೆಶಿನ್ ಬರಲಿದೆ. ಸದ್ಯಕ್ಕೆ ಕೆರೆಯ ಕಳೆ ತೆಗೆಯುವ ಕುರಿತು ಮಾತ್ರ ಗಮನಹರಿಸುತ್ತಿದ್ದೇವೆ. ಮಣ್ಣು ಮತ್ತು ಹೂಳು ತೆಗೆಯಲು ಬಹಳ ಸಮಯ ಬೇಕಾಗುತ್ತದೆ. ಮಳೆ ಬಂದಾಗ ಕೆರೆ ಸ್ವಚ್ಛಗೊಳಿಸುವುದು ಬಹಳ ದೊಡ್ಡ ಸವಾಲು. ಆದರೆ ನಾವದನ್ನು ಎದುರಿಸಲೇಬೇಕು ಎನ್ನುತ್ತಾರೆ.
ಆದರೆ ಬಿಡಿಎ ಅಧಿಕಾರಿಗಳಿಗೆ ಇಲ್ಲಿನ ಮಣ್ಣು ಅಥವಾ ಕಸದ ರಾಶಿಯನ್ನು ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ಬಿಡಬ್ಲ್ಯುಎಸ್ಎಸ್ ಬಿ ಒಳಚರಂಡಿ ನೀರನ್ನು ಬಿಡುವುದನ್ನು ನಿಲ್ಲಿಸಿದೆ. 
SCROLL FOR NEXT