ಬೆಂಗಳೂರು: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ನಗ್ನ ಸ್ಥಿತಿಯಲ್ಲಿರುವ ಫೋಟೊಗಳನ್ನು ಫೇಸ್‌ಬುಕ್‌ಗೆ ಹಾಕುವುದಾಗಿ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಸರ್ಕಾರಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ಅರಣ್ಯ ಇಲಾಖೆಯ ಕಚೇರಿ ಸಹಾಯಕ ಸಿ.ಕೃಷ್ಣ (52) ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕೃಷ್ಣ 4.76 ಲಕ್ಷ ಹಣ ನೀಡುವಂತೆ ಇಲ್ಲದಿದ್ದರೇ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಅಶ್ಲೀಲ ಫೋಟೋಗಳನ್ನು ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಏಪ್ರಿಲ್ 25 ರಂದು ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಏಪ್ರಿಲ್ 26 ರಂದು ಕೃಷ್ಣನನ್ನು ಬಂಧಿಸಲಾಗಿತ್ತು. ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.
ಕೃಷ್ಣ ಎಸ್.ಎಸ್.ಬಿಲ್ಡಿಂಗ್‌ನ 4ನೇ ಮಹಡಿಯ ಕಚೇರಿಯಲ್ಲಿ ಕೆಲಸ ಮಾಡುತ್ತಾನೆ. ಸಂತ್ರಸ್ತೆ ಕೂಡ ಅದೇ ಕಟ್ಟಡದ ಇನ್ನೊಂದು ಕಚೇರಿಯಲ್ಲಿ ಶೀಘ್ರ ಲಿಪಿಕಾರರಾಗಿದ್ದಾರೆ. ಇಬ್ಬರೂ ಐದಾರು ವರ್ಷಗಳಿಂದ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಗೆಳತಿ ಸುಮಲತಾ ಜತೆ ನಾನು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಈ ಅವಧಿಯಲ್ಲಿ ಆಕೆ ನನ್ನ ಫೋಟೊಗಳನ್ನು ತೆಗೆದುಕೊಂಡಿದ್ದಳು. ಸ್ನಾನ ಮಾಡುತ್ತಿರುವ ದೃಶ್ಯಗಳನ್ನೂ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಳು. ಆ ನಂತರ ಆಕೆ ಕೆಲಸದ ಮೇಲೆ ಕಲುಬುರ್ಗಿಗೆ ತೆರಳಿದಳು ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಹಣಕಾಸಿನ ತೊಂದರೆಯಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಆಗ ಕೃಷ್ಣ ನೆರವಾಗಿದ್ದ. ಆ ಮೂಲಕ ನಮ್ಮ ಕುಟುಂಬಕ್ಕೂ ಹತ್ತಿರವಾಗಿದ್ದ. ನಂತರ ಆತನಿಗೆ ನನ್ನ ಗೆಳತಿಯ ಪರಿಚಯವಾಯಿತು. ಆಕೆ, ಹಿಂದೆ ತೆಗೆದಿದ್ದ ಫೋಟೊ ಹಾಗೂ ವಿಡಿಯೊಗಳನ್ನು ಆತನಿಗೆ ಕೊಟ್ಟಿದ್ದಳು. ಆ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆತನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೆದರಿಕೆ ಇಡುತ್ತಿದ್ದ, ಹಣ ನೀಡದಿದ್ದರೇ ಕೊಲ್ಲುವುದಾಗಿ ಹೆದರಿಸಿದ್ದ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.