ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಮೂರನೇ ದಿನವಾದ ಶುಕ್ರವಾರವೂ ಮುಂದುವರೆದಿದ್ದು, ಕರ್ನಾಟಕದ ಪ್ರಭಾವಿ ಸಚಿವರ ವಿರುದ್ಧದ ಐಟಿ ತನಿಖೆಗೆ ಜಾರಿ ನಿರ್ದೇಶನಾಲಯ(ಇಡಿ)ವೂ ಕೈ ಜೋಡಿಸುವ ಸಾಧ್ಯತೆ ಇದೆ. ಒಂದು ವೇಳೆ ಐಟಿ ತನಿಖೆಗೆ ಇಡಿ ಸಾಥ್ ನೀಡಿದರೆ ಡಿಕೆ ಶಿವಕುಮಾರ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಎರಡು ದಿನಗಳ ಕಾಲ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ವೇಳೆ ಬೇನಾಮಿ ಆಸ್ತಿಗೆ ಸಂಬಂಧಿಸಿದ ಭಾರಿ ಪ್ರಮಾಣದ ದಾಖಲೆಗಳು, ಭಾರಿ ಮೊತ್ತದ ನಗದು, ಚಿನ್ನಾಭರಣ ಮತ್ತು ಅಕ್ರಮವಾಗಿ ನಿಷೇಧಿತ ನೋಟ್ ಗಳನ್ನು ವಿನಿಮಯ ಮಾಡಿಕೊಂಡಿರುವುದು ಸಹ ಪತ್ತೆಯಾಗಿದೆ.
ಐಟಿ ಅಧಿಕಾರಿಗಳು ಕಳೆದ ಬುಧವಾರದಿಂದ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಸುಮಾರು 36 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಇಂದು ಸಹ ಅವರ ಮಾವ ಹಾಗೂ ಇತರೆ ಆಪ್ತರ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿದೆ.
ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ, ಐಟಿ ಅಧಿಕಾರಿಗಳು ಸದ್ಯ ಸಚಿವರನ್ನು ಬಂಧಿಸುವುದಿಲ್ಲ. ಕೇವಲ ಅವರ ಆಸ್ತಿ ಮತ್ತು ತೆರಿಗೆ ವಂಚನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ದಾಳಿಯ ನಂತರ ವಿವರಣೆ ನೀಡಲು ಶಿವಕುಮಾರ್ ಅವರಿಗೆ ಸಮಯ ನೀಡುತ್ತಾರೆ. ಆದಾಯ ತೆರಿಗೆ ಇಲಾಖೆ ಯಾವುದೇ ವ್ಯಕ್ತಿಯನ್ನು ಬಂಧಿಸುವುದಿಲ್ಲ. ಆದರೆ ಐಟಿ ತನಿಖೆಗೆ ಇಡಿ ಸೇರಿಕೊಂಡರೆ ಮಾತ್ರ ಸಚಿವರನ್ನು ಬಂಧಿಸಲಾಗುತ್ತದೆ ಮತ್ತು ಸದ್ಯ ಪರಿಸ್ಥಿತಿಯಲ್ಲಿ ಇದು ಬಹುತೇಕ ಖಚಿತ ಎನ್ನಲಾಗಿದೆ.
ಈ ಮಧ್ಯೆ, ಬಿಡದಿಯ ಕಾರ್ಯಕರ್ತ ಗುರುಪ್ರಸಾದ್ ಅವರು ಸಚಿವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಇಡಿಗೆ ದೂರು ನೀಡಿದ್ದು, ಸಚಿವರು ಅಕ್ರಮ ಹಣ ವಹಿವಾಟು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನೋಟ್ ನಿಷೇಧದ ನಂತರ ಡಿ ಕೆ ಶಿವಕುಮಾರ್ ಅವರು ಅಕ್ರಮವಾಗಿ ಸಾವಿರಾರು ಕೋಟಿ ರುಪಾಯಿ ನಿಷೇಧಿತ ನೋಟ್ ಗಳನ್ನು ವಿನಿಮಯ ಮಾಡಿಕೊಂಡಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಗುರುಪ್ರಸಾದ್ ಅವರು ಇಡಿಗೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics