ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಕವಿಮನೆಯ ಹೂವಿನ ಪ್ರತಿಕೃತಿ
ಬೆಂಗಳೂರು: ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿ 50 ವರ್ಷಗಳು ತುಂಬಿದ ಸಂದರ್ಭವನ್ನು ಸ್ಮರಿಸುವ ಸಲುವಾಗಿ, ಈ ವರ್ಷದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಈ ಗೌರವ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹಗಳನ್ನು ಮೆಲುಕು ಹಾಕಲಾಗುತ್ತಿದೆ. ಕುಪ್ಪಳ್ಳಿಯಲ್ಲಿರುವ ಕವಿಮನೆ ಲಾಲ್ ಬಾಗ್ ನ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಕವಿಮನೆ ಜೊತೆಗೆ ಜೋಗ್ ಪಾಲ್ಸ್, ಕವಿಶೈಲ ನಗರದ ಹೃದಯಭಾಗದಲ್ಲಿರುವ ಗಾರ್ಡನ್ ನಲ್ಲಿ ನೆಲೆ ನಿಂತಿವೆ.
ಶುಕ್ರವಾರ ರಾಜ್ಯಪಾಲ ವಜುಬಾಯಿ ವಾಲಾ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದರು. ಆಗಸ್ಟ್ 15ರ ವರೆಗೂ ಈ ಪ್ರದರ್ಶನ ಮುಂದುವರಿಯಲಿದೆ. ಗ್ಲಾಸ್ ಹೌಸ್ ನಲ್ಲಿ ಕವಿಮನೆ ನಿರ್ಮಾಣಕ್ಕಾಗಿ 3.5 ಲಕ್ಷ ಡಚ್ ರೋಸ್ ಗಳನ್ನು ಬಳಸಲಾಗಿದೆ, ಪ್ರತಿ ಮೂರು ದಿನಕ್ಕೊಮ್ಮೆ ಫ್ರೆಶ್ ಲುಕ್ ಗಾಗಿ ತೋಟಗಾರಿಕೆ ಇಲಾಖೆ ಹೂಗಳನ್ನು ಬದಲಾಯಿಸುತ್ತಿರುತ್ತದೆ. ಈ ಮನೆ ಮಾದರಿ ನಿರ್ಮಾಣಕ್ಕಾಗಿ ಒಟ್ಟು 10.5 ಲಕ್ಷ ಹೂಗಳನ್ನು ಬಳಸಲಾಗಿದೆ, 21 ಅಡಿ ಉದ್ದ ಮತ್ತು 38 ಅಡಿ ಅಗಲದಲ್ಲಿ ನಿರ್ಮಿಸಲಾಗಿದೆ.
ಬೆಂಗಳೂರಿನಲ್ಲಿ ಕವಿಮನೆ ನೋಡಲು ಖುಷಿಯಾಗುತ್ತಿದೆ, ಮನೆ ನಿರ್ಮಾಣಕ್ಕಾಗಿ ಬಳಸಿರುವ ಹೂವಿನ ಬಣ್ಣ ಪರ್ಫೆಕ್ಟ್ ಆಗಿದೆ. ಕುವೆಂಪು ಅವರಿಂದಾಗಿ 50 ವರ್ಷದ ಹಿಂದೆ ಕನ್ನಡ ಭಾಷೆಗೆ ಜ್ಞಾನಪೀಠ ಸಿಕ್ಕಿದೆ. ಇದು ಅವರಿಗೆ ನಮನ ಸಲ್ಲಿಸುವ ಉತ್ತಮ ಕೆಲಸವಾಗಿದೆ ಎಂದು ತೀರ್ಥಹಳ್ಳಿ ಮೂಲದ ಚಂದ್ರಶೇಖರ್ ಭಟ್ ಹೇಳಿದ್ದಾರೆ.
ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಸಮಾಧಿ ಕವಿಶೈಲದ ಪ್ರತಿಬಿಂಬವನ್ನು ಕೂಡ ಅದ್ಭುತವಾಗಿ ರೂಪಿಸಲಾಗಿದೆ, ತ್ರಿಡಿ ಮಿನಿಯೇಚರ್ ಬಳಸಿ ತಯಾರಿಸಲಾಗಿರುವ ಜೋಗ್ ಪಾಲ್ಸ್ ನಲ್ಲಿ ರಾಜಾ, ರಾಣಿ, ರಾಕೆಟ್ ಮತ್ತು ರೋರರ್ ನೋಡಬಹುದು. ಕುಪ್ಪಳ್ಳಿ ಸೇರಿದಂತೆ ಲಾಲ್ ಬಾಗ್ ನಲ್ಲಿ ಮಿನಿ ಮಲೆನಾಡು ರೂಪಿಸಲಿ ಸುಮಾರು 30 ಕಲಾವಿದರು 25 ದಿನ ಕೆಲಸ ಮಾಡಿದ್ದಾರೆ.
ಕುವೆಂಪು ಅವರ ಕವಿತೆಗಳು, ಫೋಟೋ ಗ್ರಾಫ್ ಕಟೌಟ್ಸ್ ಲಾಲ್ ಬಾಗ್ ನಾದ್ಯಂತ ಹರಡಲಾಗಿದೆ. ನಾಡ ಗೀತೆಸ ರೈತ ಗೀತೆ, ಮತ್ತು ವಿಶ್ವ ಮಾನವ ಸಂದೇಶವಿರುವ ಸಾಹಿತ್ಯದ ಫೋಟೋ ಗ್ಯಾಲರಿ ಕೂಡ ಮಾಡಲಾಗಿದೆ.
ಪ್ರತಿದಿನ ಸಂಜೆ 4 ರಿಂದ 7 ಗಂಟೆವರೆಗೆ ಕುವೆಂಪು ಅವರ ಕವಿತೆಗಳನ್ನು ಹಾಡಲು ಅವಕಾಶ ಕಲ್ಪಿಸಲಾಗಿದೆ. ಕುವೆಂಪು ಅವರ ಮಹಾ ಕಾದಂಬರಿಗಳಾದ ಮಲೆಗಳಲ್ಲಿ ಮಧು ಮಗಳು ಮತ್ತು ಕಾನೂರು ಹೆಗ್ಗಡತಿ ರಾಮಾಯಣ ದರ್ಶನಂ ನ ಕೆಲ ಭಾಗಗಳ ನಾಟಕಗಳ ಪಾತ್ರಗಳನ್ನು ಅಭಿನಯಿಸಲು ದೊಡ್ಡ ವೇದಿಕೆ ಸೃಷ್ಟಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
150 ಬಗೆಯ ಹೂವುಗಳು, 10 ಸಾವಿರ ಬಗೆಯ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದಕ್ಕಾಗಿ 1.7 ಕೋಟಿ ರು ಹಣ ಖರ್ಚು ಮಾಡಲಾಗಿದ್ದು, ಈ ಹದಿನೈದು ದಿನಗಳಲ್ಲಿ 4 ಲಕ್ಷ ಮಂದಿ ವೀಕ್ಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಲಾಲ್ ಬಾಗ್ ಪಶ್ಚಿಮ ಧ್ವಾರದಿಂದ ಮೆಟ್ರೋ ಪ್ರಯಾಣಿಕರು ಫಲ ಪುಷ್ಪ ಪ್ರದರ್ಸನ ಪ್ರವೇಶಕ್ಕೆ ಅನುಕೂಲವಾಗಲಿದೆ. ಪಾರ್ಕಿಂಗ್ ಗಾಗಿ ಹಾಪ್ ಕಾಮ್ಸ್ , ಶಾಂತಿ ನಗರ ಬಸ್ ಸ್ಟ್ಯಾಂಡ್ ಮತ್ತು ಆನ್ ಅಮೀನ್ ಕಾಲೇಜು ಬಳಿ ಸ್ಥಳದ ವ್ಯವಸ್ಥೆ ಮಾಡಲಾಗಿದೆ.
60ರ ದಶಕದಲ್ಲಿ ನಮ್ಮ ತಂದೆ ಎಂ.ಎಚ್ ಮರಿಗೌಡ ನಿರ್ದೇಶಕರಾಗಿದ್ದಾಗ ಅಪ್ಪನ ಜೊತೆ ಲಾಲ್‌ಬಾಗ್‌ಗೆ ಭೇಟಿ ನೀಡುತ್ತಿದ್ದ ನೆನಪುಗಳನ್ನು ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಅವರು ಮೆಲುಕು ಹಾಕಿದರು.
ತಂದೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಆಗಾಗ ಬೆಂಗಳೂರಿಗೆ ಬರುತ್ತಿದ್ದರು. ಆಗ ತೋಟಗಾರಿಕಾ ಇಲಾಖೆಯ ಅಧಿಕಾರಿಯಾಗಿದ್ದ ಮರಿಗೌಡ ಅವರು ಲಾಲ್‌ಬಾಗ್‌ಗೆ ನಮ್ಮನ್ನು ಆಹ್ವಾನಿಸುತ್ತಿದ್ದರು. ತಂದೆಯ ಜೊತೆ ಇಲ್ಲಿ ಸುತ್ತಾಡಿದ ನೆನಪು ಈಗಲೂ ಹಸಿರಾಗಿದೆ.
ಮರಿಗೌಡ ಅವರು ಊಟಿಯಿಂದ ತರಿಸಿದ್ದ ಹೂವಿನ ಗಿಡವೊಂದನ್ನು ನಮ್ಮ ತಂದೆಗೆ ನೀಡಿದ್ದರು. ಅದನ್ನು ನಮ್ಮಮ್ಮ ಮೈಸೂರಿನ ಮನೆಯಂಗಳಲ್ಲಿ ಬೆಳೆಸಿದ್ದರು. ಅಮ್ಮ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಆ ಗಿಡವನ್ನು ಕೆಲವು ವರ್ಷದ ಹಿಂದೆ ಕಳೆದುಕೊಂಡೆವು. ಅದರ ಕಸಿ ಈಗಲೂ ಇದೆ ಎಂದು ಸ್ಮರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics