ಬೆಳಗಾವಿ: ರಕ್ಷಾ ಬಂಧನ ಹಬ್ಬ ಹಿನ್ನಲೆಯಲ್ಲಿ ಸಹೋರನಿಗಾಗಿ ರಾಖಿ ಖರೀದಿಸಲು ಪತಿ ರೂ.10 ಕೊಡಲಿಲ್ಲವೆಂದು ಮನನೊಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಡಗಾವಿಯ ವಡ್ಡರ ಛಾವಣಿಯಲ್ಲಿ ಸೋಮವಾರ ನಡೆದಿದೆ.
ಮಹಾದೇವಿ ಅಶೋಕ ಗೊಲ್ಲರ (23) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಮೂರು ವರ್ಷಗಳ ಹಿಂದಷ್ಟೇ ಅಶೋಕ್ ಎಂಬುವವರನ್ನು ಮಹಾದೇವಿ ವಿವಾಹವಾಗಿದ್ದರು. ಅಶೋಕ್ ಮದ್ಯವ್ಯಸನಿಯಾಗಿದ್ದು. ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಕೆಲ ದಿನಗಳಿಂದ ಇಬ್ಬರ ನಡುವೆ ಜಗಳವಾಗುತ್ತಲೇ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಮಹಾದೇವಿಯವರ ಸಹೋದರನ ಹತ್ತಿರದಲ್ಲೇ ಇದ್ದು, ರಕ್ಷಾ ಬಂಧನ ಹಿನ್ನಲೆಯಲ್ಲಿ ತನ್ನ ಅಣ್ಣನಿಗೆ ರಾಖಿ ಕಟ್ಟುವ ಸಲುವಾಗಿ ಮಹಾದೇವಿ ಪತಿಯ ಬಳಿ ರೂ.10 ಕೊಡುಂತೆ ಕೇಳಿದ್ದಾರೆ. ಈ ವೇಳೆ ಪತಿ ಅಶೋಕ್ ಹಣ ಕೊಡಲು ನಿರಾಕರಿಸಿದ್ದಾನೆ. ನಿನ್ನ ಸಹೋದರನಿಗೆ ನಮ್ಮೊಂದಿಗೆ ಉತ್ತಮ ಸಂಬಂಧದಲ್ಲಿರಲು ಇಷ್ಟವಿಲ್ಲ ಎಂದಾಗ ರಾಖಿ ಕಟ್ಟುವ ಆಗತ್ಯವಿಲ್ಲ ಎಂದು ಹೇಳಿದ್ದಾನೆ.
ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳವಾದ ಬಳಿಕ ಅಶೋಖ್ ಮನೆಯಿಂದ ಹೊರ ಹೋಗಿದ್ದಾನೆ. ಪತಿಯ ಮಾತುಗಳಿಂದ ತೀವ್ರವಾಗಿ ನೊಂದಿದ್ದ ಮಹಾದೇವಿಯವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.