ಕೆಡಿಎ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು: ನಗರದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.
ಈ ನಿಯಮವನ್ನು ಜಾರಿಗೆ ತರಲು 20 ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು ಪಾಲಿಸಲು ವಿಫಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ನಗರ ಜಿಲ್ಲಾಧಿಕಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಹಾಕಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಲಾಗಿದೆ. ಕನ್ನಡದಲ್ಲಿ ನಾಮಫಲಕ ಹಾಕದಿರುವ ಅಂಗಡಿಗಳ ಅನುಮತಿಯನ್ನು ರದ್ದು ಮಾಡುವ ಅವಕಾಶ ಬಿಬಿಎಂಪಿಗೆ ಇದೆ ಎಂದು ಅವರು ಹೇಳಿದರು.
ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕುತ್ತದೆಯೇ ಎಂದು ಪರೀಕ್ಷೆ ಮಾಡಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೂಡ ಅಧ್ಯಕ್ಷರು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರಣಿ ತಪಾಸಣೆ ನಡೆಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ನಗರ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್ ಸೈಟ್ ನಲ್ಲಿ ಕನ್ನಡ ಭಾಷೆಯ ಅವತರಣಿಕೆಯಿಲ್ಲ. ಈ ಬಗ್ಗೆ ಪ್ರಾಧಿಕಾರ, ಕನ್ನಡ ಭಾಷೆಯನ್ನು ಪ್ರಾಥಮಿಕವಾಗಿ ಮತ್ತು ಇಂಗ್ಲಿಷ್ ನ್ನು ಆಯ್ಕೆಯ ಭಾಷೆಯ ಅವತರಣಿಕೆಯಾಗಿ ನೀಡಬೇಕೆಂದು ಹೇಳಿದೆ ಕೂಡ ಎಂದರು.