ಬೆಂಗಳೂರು: ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಆಪ್ತ ವಿನಯ್ ಅಪಹರಣ ಯತ್ನ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಕುಮಾರ್ ನನ್ನು ಸಿಐಡಿ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು.
ಪ್ರಕರಣ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಸಂತೋಷ್ ಕುಮಾರ್ ನನ್ನು ಸತತವಾಗಿ ಎರಡನೇ ದಿನವೂ ಕೂಡಾ ಮಲ್ಲೇಶ್ವರಂ ಎಸಿಪಿ ಆನಂದ್ ಬಡಿಗೇರ್ ನೇತೃತ್ವದ ತಂಡ ವಿಚಾರಣೆ ನಡೆಸಿದೆ.
ಇನ್ನು ವಿಚಾರಣೆ ವೇಳೆ ಸಂತೋಷ್ ಕುಮಾರ್ ಗೊಂದಲದ ಉತ್ತರಗಳನ್ನು ನೀಡುತ್ತಿದ್ದಾರೆ. ಮೊದಲಿಗೆ ವಿನಯ್ ಮತ್ತು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಯಾರು ಅಂತ ಗೊತ್ತಿಲ್ಲ ಅಂದು ನಂತರ ಆತ ನನ್ನ ಸ್ನೇಹಿತ ಎಂದು ಹೇಳಿದ್ದಾನೆ. ನಮ್ಮ ನಡುವೆ ಕೆಲ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಬೇರೆ ಯಾರೋ ಮಾಡಿರುವ ಕೃತ್ಯದಲ್ಲಿ ನನ್ನ ಹೆಸರು ಥಳಕು ಹಾಕಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಂತೋಷ್ ಕುಮಾರ್ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಶನಿವಾರವೂ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.