ರಾಜ್ಯ

ಸ್ವಾತಂತ್ರ್ಯ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ

Manjula VN

ಬೆಂಗಳೂರು: 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿಯ ಜನರಿಗೆ ವರುಣ ದೊಡ್ಡ ಶಾಕ್'ನ್ನು ನೀಡಿದ್ದು, ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವಸ್ತಗೊಂಡಿದೆ. 

ರಾತ್ರಿಯಿಡೀ ಗುಡುಗು ಸಹಿತ ಸುರಿದ ಭಾರೀ ಮಳೆಯಿಂದಾಗಿ ಮಾಣಿಕ್ ಷಾ ಪರೇಡ್ ಮೈದಾನ ಮಳೆಯಿಂದಾಗಿ ಕೆಲಸು ಗದ್ದೆಯಂತಾಗಿತ್ತು. ಪಥಸಂಚನಕ್ಕಾಗಿ ಮಾಡಿದ್ದ ಮಾರ್ಕಿಂಗ್ ಗಳು, ಧ್ವಜಾರೋಹಣದ ಸಿದ್ಧತೆಗಳು ಹಾಳಾಗಿ ಸಮಸ್ಯೆಗಳು ಎದುರಾಗುವಂತಾಗಿತ್ತು. 

ಶಾಂತಿನಗರ, ವಿಲ್ಸನ್ ಗಾರ್ಡನ್, ಡೈರಿಸರ್ಕಲ್, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಸೂರುರಸ್ತೆ, ಬೊಮ್ಮನಹಳ್ಳಿ, ಸಿಲ್ಕ್ ಬೋರ್ಡ್ ನಲ್ಲಿ ಧಾರಾಕಾರ ಮಳೆ ಸುರಿದಿದೆ. ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಹೆದ್ದಾರಿ ಹೊಳೆಯಂತೆ ತುಂಬಿಕೊಂಡಿದೆ. 

ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ವಾಹನಗಳೊಳಗೇ ನೀರು ನುಗ್ಗಿ ನಡುರಸ್ತೆಯಲ್ಲಿಟೇ ವಾಹನಗಳು ಕೆಟ್ಟಿ ನಿಂತಿತ್ತು. ಇದರಿಂದಾಗಿ ಸಂಚಾರಕ್ಕೆ ಭಾರೀ ಸಮಸ್ಯೆಗಳು ಎದುರಾಗಿತ್ತು. ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ನಗರದ ಜನತೆ ಪರದಾಡುವಂತಾಗಿತ್ತು. ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರ ನಿದ್ದೆಯನ್ನೂ ಮಳೆರಾಯ ಹಾಳು ಮಾಡಿದ್ದ. ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ನೀರನ್ನು ಹೊರ ಹಾಕುವಲ್ಲಿ ಜನರು ನಿರತರಾಗಿದ್ದರು. 

ಮಳೆರಾಯನ ಅಬ್ಬರದಿಂದಾಗಿ ಅಸ್ತವಸ್ತವಾದ ಜನಜೀವನವನ್ನು ಕಂಡು ನಾಗರೀಕರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ದಿನ ಸುರಿದ ಮಳೆಯನ್ನೇ ಎದುರಿಸಲಾಗದ ಬೆಂಗಳೂರಿನಲ್ಲಿ ನಿರಂತರ ಮಳೆಯಾದರೆ ಜನರ ಸ್ಥಿತಿ ಏನಾಗಬಹುದು ಎಂದಿರುವ ಜನತೆ ಬಿಬಿಎಂಪಿ ಮೇಯರ್ ಹಾಗೂ ಸದಸ್ಯರುಗಳ ವಿರುದ್ಧ ಕಿಡಿಕಾರಿದ್ದಾರೆ. 
SCROLL FOR NEXT