ರಾಜ್ಯ

ಮಹಾ ಮಳೆ ಅವಾಂತರ: ನಗರದ ಬಹುಮಹಡಿ ಕಟ್ಟಡಕ್ಕೆ ಹಾನಿ, ವಾಲಿರುವ ಕಟ್ಟಡ ಕುಸಿಯುವ ಭೀತಿ

Srinivasamurthy VN

ಬೆಂಗಳೂರು: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ನಗರದ ಈಜಿಪುರದಲ್ಲಿ ಇದೀಗ ಹೊಚ್ಚ ಹೊಸ ಕಟ್ಟಡವೊಂದು ಕುಸಿಯುವ ಆತಂಕ ಸೃಷ್ಟಿಯಾಗಿದೆ.

ಈಜಿಪುರದ 14ನೇ ಮುಖ್ಯರಸ್ತೆಯಲ್ಲಿ ಇತ್ತೀಚೆಗಷ್ಟೇ ನಿರ್ಮಾಣವಾಗಿದ್ದ ಮತ್ತು ಇನ್ನೂ ಗೃಹ ಪ್ರವೇಶ ಕೂಡ ಆಗಿರದ 5 ಅಂತಸ್ತಿನ ಕಟ್ಟಡ ಇದೀಗ ಆತಂಕ ಸೃಷ್ಟಿಯಾಗಿದ್ದು, ಬೆಳಗಿನಿಂದ ಕಟ್ಟಡ ಒಂದು ಕಡೆಗೆ ವಾಲಲು ಆರಂಭಿಸಿದ್ದು, ಯಾವುದೇ ಕ್ಷಣದಲ್ಲೂ  ಕಟ್ಟಡ ಕುಸಿಯುವ ಭೀತಿ ಶುರುವಾಗಿದೆ. ಸೋಮವಾರ ಮತ್ತು ನಿನ್ನೆ ಸುರಿದ ಮಳೆಯಿಂದಾಗಿ ಮನೆಯ ಅಡಿಪಾಯಕ್ಕೆ ಹಾನಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಇದೇ ಕಾರಣಕ್ಕೆ ಕಟ್ಟಡ ವಾಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ  ಘಟನಾ ಸ್ಥಳಕ್ಕೆ ಆಗಮಿಸಿರುವ ಬಿಬಿಎಂಪಿ ಅಧಿಕಾರಿಗಳು ಕಟ್ಟಡವನ್ನು ಸುರಕ್ಷಿತವಾಗಿ ನೆಲಸಮಗೊಳಿಸುವ ಕುರಿತು ಚರ್ಚೆಯಲ್ಲಿ ತೊಡಗಿದ್ದಾರೆ.

ಈಗಗಾಲೇ ಘಟನಾ ಸ್ಥಳಕ್ಕೆ ಒಂದು ಜೆಸಿಬಿ ಯಂತ್ರ ಕೂಡ ಆಗಮಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಂಗವಾಗಿ ಸ್ಥಳದಲ್ಲಿ ಅಗ್ನಿಶಾಮಕ ಹಾಗೂ ಬಿಬಿಎಂಪಿ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳದ  ಸಿಬ್ಬಂದಿಯವರು ಪಕ್ಕದ ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ.

ಮಳೆ ಅವಾಂತರವೇ ಅಥವಾ ಕಳಪೆ ಕಾಮಗಾರಿಯೇ?
ಇನ್ನು ಈ ಕಟ್ಟಡದ ಮಾಲೀಕರ ಯಾರೂ ಎಂದು ತಿಳಿದುಬಂದಿಲ್ಲವಾದರೂ, ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಈ ಪ್ರದೇಶದಲ್ಲಿ ನೆಲ ಅಂತಸ್ತಿನ ಕಟ್ಟಡ ನಿರ್ಮಿಸಲು ಮಾತ್ರ ಅವಕಾಶವಿದೆ. ಆದರೆ ಇಲ್ಲಿ 5 ಅಂತಸ್ತಿನ  ಕಟ್ಟಡ ನಿರ್ಮಾಣ ಮಾಡಲಾಗಿದೆ. ಸ್ಥಳೀಯರು ತಿಳಿಸಿರುವಂತೆ ಇಲ್ಲ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಕಡತ ಪರಿಶೀಲನೆ ಮಾಡಿ ಈ ಬಗ್ಗೆ ವಿವರ ಸಂಗ್ರಹಿಸುತ್ತೇವೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಬೆಳಗ್ಗೆ ಸುಮಾರು 4.30ರ ಹೊತ್ತಿಗೆ ಕಟ್ಟಡದಿಂದ ದೊಡ್ಡ ಶಬ್ದ ಕೇಳಿಬಂದ ಬಳಿಕ ಸ್ಥಳೀಯರು ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ.  ಬೆಳಗ್ಗೆಯಿಂದ ಕಟ್ಟಡ ಹಂತ, ಹಂತವಾಗಿ ವಾಲುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಆತಂಕ  ವ್ಯಕ್ತಪಡಿಸಿದ್ದಾರೆ. ಭಾರೀ ಮಳೆಗೆ ಕಟ್ಟಡ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT