ಬೆಂಗಳೂರು: ರಾಜ್ಯಾದ್ಯಂತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 9,000 ಮಂದಿ ತರಬೇತಿ ಹೊಂದದ ಶಿಕ್ಷಕರು 2019ರ ಏಪ್ರಿಲ್ ಒಳಗಾಗಿ ದೂರಶಿಕ್ಷಣ ಮೂಲಕ ಡಿಪ್ಲೊಮಾ(ಡಿ.ಎಡ್) ಕೋರ್ಸ್ ಪಡೆಯದಿದ್ದರೆ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಎಲ್ಲಾ ಶಿಕ್ಷಕರು ಕನಿಷ್ಟ ಅರ್ಹತೆಯಾಗಿ ಈ ಪದವಿಯನ್ನು ಪಡೆದಿರಬೇಕಾಗುತ್ತದೆ.
ಡಿ.ಎಡ್ ಪದವಿ ಪೂರೈಸದೆ ಇರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಶಿಕ್ಷಕರು 2019ರ ಮಾರ್ಚ್ 31ರೊಳಗೆ ಕಡ್ಡಾಯವಾಗಿ ಡಿ.ಎಡ್ ಶಿಕ್ಷಣ ಪಡೆದುಕೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ. ತಪ್ಪಿದಲ್ಲಿ 2019ರ ಏ.1ರಿಂದ ಅಂತಹ ಶಿಕ್ಷಕರು ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಾಗಿರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಆರ್ಟಿಇ ಕಾಯ್ದೆ -2009ಕ್ಕೆ ತಿದ್ದುಪಡಿ ತಂದು ಇತ್ತೀಚೆಗೆ ಸಂಸತ್ ಅಧಿವೇಶನದಲ್ಲಿ ಅನುಮೋದನೆ ಪಡೆದ ಬಳಿಕ ಕೇಂದ್ರ ಸರ್ಕಾರ ಈ ಹೊಸ ಆದೇಶವನ್ನು ಹೊರಡಿಸಿದೆ.
9,000 ಮಂದಿ ಶಿಕ್ಷಕರಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಯವರು ಸೇರಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಡೆಸಿದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಈ ಅಂಕಿಅಂಶ ಬಹಿರಂಗವಾಗಿದೆ. ನಿನ್ನೆ ನಡೆದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಎಲ್ಲಾ ರಾಜ್ಯಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಭಾಗವಹಿಸಿದ್ದರು.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಈ ಮಾಹಿತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಅವರಿಗೆ ನೀಡಿದರು. ವಿಡಿಯೊ ಕಾನ್ಫರೆನ್ಸ್ ನಂತರ ಮಾತನಾಡಿದ ಸಚಿವ ತನ್ವೀರ್ ಸೇಠ್, ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನೊಟೀಸ್ ಹೊರಡಿಸಿದ ನಂತರ ತರಬೇತಿ ಪಡೆಯದಿರುವ ಶಿಕ್ಷಕರ ಮಾಹಿತಿಗಳನ್ನು ನಾವು ಸಂಗ್ರಹಿಸಿದೆವು. ಅಂಕಿಅಂಶ ಪ್ರಕಾರ, ಸುಮಾರು 9,000 ಶಿಕ್ಷಕರು ತರಬೇತಿ ಹೊಂದಿಲ್ಲ ಎಂದರು.
ಒಟ್ಟು 9,278 ಮಂದಿ ತರಬೇತಿ ಹೊಂದದಿರುವ ಶಿಕ್ಷಕರ ಪೈಕಿ 8,519 ಮಂದಿ ಖಾಸಗಿ ಶಾಲೆಯವರು ಮತ್ತು 759 ಮಂದಿ ಶಿಕ್ಷಕರು ಸರ್ಕಾರಿ ಶಾಲೆಯವರು. ಜಿಲ್ಲಾ ಮಟ್ಟದಲ್ಲಿ ಅತಿಥಿ ಶಿಕ್ಷಕರಾಗಿರುವವರು ಕೂಡ ಇದರಲ್ಲಿದ್ದಾರೆ. ಈ ಎಲ್ಲಾ ಶಿಕ್ಷಕರಿಗೆ ಡಿ.ಎಡ್ ಪದವಿಯನ್ನು ಮುಕ್ತ ವಿಶ್ವ ವಿದ್ಯಾಲಯದಡಿ ಪಡೆಯಲು ಹೇಳಿದ್ದೇವೆ ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.
ಬಿ.ಎಡ್ ಮತ್ತು ಡಿ.ಎಡ್ ಕೋರ್ಸ್ ಗಳನ್ನು ಖಾಸಗಿಯಾಗಿ ಮಾಡುವುದನ್ನು ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಕೆಲವು ಸಚಿವರು ಪ್ರಶ್ನಿಸಿದಾಗ, ಅದು ಹೊಸದಾಗಿ ಶಿಕ್ಷಕರಾಗಿ ನೇಮಕವಾಗುವವರಿಗೆ ಅನ್ವಯವಾಗುತ್ತದೆಯೇ ಹೊರತು ಈಗಾಗಲೇ ಸೇವೆಯಲ್ಲಿರುವವರಿಗೆ ಅಲ್ಲ ಎಂದು ತಿಳಿಸಿದರು.