ಬೆಂಗಳೂರು: ಭಾರೀ ಪ್ರಚಾರದೊಂದಿಗೆ ಆರಂಭವಾದ ಇಂದಿರಾ ಕ್ಯಾಂಟೀನ್ ಗಳ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುತ್ತಿದೆ. ಅಡುಗೆ ಕೋಣೆಗಳ ಸ್ವಚ್ಛತೆಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಸದ್ಯ ಆರು ಕಿಚನ್ ಗಳಿದ್ದು, ಮುಂದಿನ ದಿನಗಳಲ್ಲಿ 27 ಅಡುಗೆ ಕೋಣೆಗಳು ಸಿದ್ಧಗೊಳ್ಳಲಿವೆ. ಪ್ರತಿಯೊಂದು ಅಡುಗೆ ಮನೆ ವಿನ್ಯಾಸ ಮಾಡುವಾಗ ಎಷ್ಟು ಜನರಿಗೆ ಊಟ ನೈಡಬಹುದು ಎಂಬದನ್ನು ಗಮನದಲ್ಲಿರಿಸಿಕೊಂಡು ಸಿದ್ದಪಡಿಸಲಾಗುತ್ತಿದೆ.
ಎಲ್ಲಾ ಅಡುಗೆಯನ್ನು ಸ್ಟೀಮರ್ ಗಳಲ್ಲಿ ತಯಾರಿಸಲಾಗುತ್ತದೆ, ಜೊತೆಗೆ ಎರಡು ಗಂಟೆಯಲ್ಲಿ 6 ಸಾವಿರ ಮಂದಿಗೆ ಅಡುಗೆ ತಯಾರಿಸಬಹುದಾಗಿದೆ. ಮೆನುವಿನಲ್ಲಿರುವ ಪ್ರಕಾರ ಪ್ರತಿದಿನ ಬಿಳಿ ಅನ್ನ ಮತ್ತು ಫ್ಲೇವರ್ಡ್ ರೈಸ್ ಮಾಡಲಾಗುತ್ತದೆ ಎಂದು ಇಂದಿರಾ ಕ್ಯಾಂಟೀನ್ ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ಹೇಳಿದ್ದಾರೆ.
ಅನ್ನ ಮಾಡಲು ಪ್ರತ್ಯೇಕ ಪಾತ್ರೆ ಬಳಸುತ್ತೇವೆ, ಪ್ರತಿಯೊಂದು ಕಿಚನ್ ನಲ್ಲಿ ಮೂರು ಇಡ್ಲಿ ಸ್ಟೀಮರ್ ಇರುತ್ತವೆ, ಇದರಲ್ಲಿ 1 ಗಂಟೆಗೆ 4,500 ಇಡ್ಲಿ ತಯಾರಿಸಬಹುದಾಗಿದೆ, ಇಲ್ಲಿ ತಯಾರಾದ ಆಹಾರವನ್ನು ಎಲ್ಲಾ ಕ್ಯಾಂಟೀನ್ ಗಳಿಗೆ ಸರಬರಾಜು ಮಾಡಲು ಹಾಟ್ ಬಾಕ್ಸ್ ಗಳಿವೆ ಇದರಲ್ಲಿ ಆಹಾರ ಪದಾರ್ಥ ಬಿಸಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಮೊಸರು ಮತ್ತು ತರಕಾರಿಗಳನ್ನು ಸಂಗ್ರಹಿಸಲು ಶೈತ್ಯಾಗಾರವಿರುತ್ತದೆ. ಒಟ್ಟಾರೆ ಪ್ರತಿ ಅಡುಗೆ ಕೋಣೆಯೂ 6 ಸಾವಿರಕ್ಕಿಂತ ಹೆಚ್ಚು ಮಂದಿಗೆ ಅಡುಗೆ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕೋಣೇನ ಅಗ್ರಹಾರದ ಕಿಚನ್ ನಲ್ಲಿ ಅಡುಗೆ ತಯಾರಿಸಲು ಬಂದಿರುವ ಶಿವಮೊಗ್ಗ ಮೂಲದ ಕೆಲಸಗಾರರ ಬಗ್ಗೆ ಯಾರೊಬ್ಬರು ಲಕ್ಷ್ಯ ವಹಿಸಿಲ್ಲ, ಉಳಿದುಕೊಳ್ಳಲು ವಸತಿ ಒದಗಿಸಿಲ್ಲ, ಕಳೆದ ರಾತ್ರಿ ಕ್ಯಾಂಟೀನ್ ನ ಮೇಲ್ಚಾವಣಿ ಮೇಲೆ ಮಲಗಿದ್ದೆವು. ಕುಡಿಯಲು ವಾಶ್ ಬೇಸಿನ್ ನ ನೀರು ಬಳಸಿದೆವು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos