ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿ
ಬೆಂಗಳೂರು: ನಮಗೆ ಹಣ ಮಾತ್ರ ಮುಖ್ಯವಲ್ಲ, ಕಾರ್ಮಿಕ ವರ್ಗವಾದ ನಮಗೆ ಸಮಯ ಕೂಡ ಮುಖ್ಯ. ಹೀಗಾಗಿ ನಾವು ಇಂದಿರಾ ಕ್ಯಾಂಟೀನ್ ಗೆ ಬದಲು ತಳ್ಳುವ ಗಾಡಿಯ ವ್ಯಾಪಾರಿಗಳು ತಯಾರಿಸುವ ಆಹಾರವನ್ನು ಹೆಚ್ಚು ಅವಲಂಬಿಸುತ್ತೇವೆ ಎನ್ನುತ್ತಾರೆ 37 ವರ್ಷದ ಆಟೋ ಚಾಲಕ ರಾಜೇಶ್.
ಕುರುಬರಹಳ್ಳಿಯ ನಿವಾಸಿಯಾದ ರಾಜೇಶ್ ಬೆಳಗ್ಗೆ 9 ಗಂಟೆಗೆ ಮನೆ ಬಿಡುತ್ತಾರೆ. ನಂತರ ಮನೆ ಸೇರುವುದು ಸಾಯಂಕಾಲ 7 ಗಂಟೆಗೆ. ನಾನು ಬೆಳಗಿನ ತಿಂಡಿ ಮತ್ತು ರಾತ್ರಿ ಊಟವನ್ನು ಮನೆಯಲ್ಲಿ ಮಾಡುತ್ತೇನೆ. ಮಧ್ಯಾಹ್ನದ ಊಟ ಹೊರಗೆ ಮಾಡಲೇಬೇಕು. ಇಂದಿರಾ ಕ್ಯಾಂಟೀನ್ ಊಟ ಚೆನ್ನಾಗಿದೆ ಎಂದು ಅನಿಸುತ್ತದೆ. ಆದರೆ ನನ್ನಂತ ಕೆಲಸದವರಿಗೆ ಸಮಯ ಕೂಡ ಮುಖ್ಯವಾಗುತ್ತದೆ. ಕೇವಲ 10 ರೂಪಾಯಿಗೆ ಊಟ ಸಿಗುತ್ತದೆಂದು ಅರ್ಧ ಗಂಟೆ ಸರದಿಯಲ್ಲಿ ನಿಂತುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ.
ಈ ಕ್ಯಾಂಟೀನ್ ಗಳ ಮುಂದೆ ಆಟೋ ನಿಲ್ಲಿಸಲು ಕೂಡ ಜಾಗವಿಲ್ಲ. ಪಾರ್ಕಿಂಗ್ ಗೆ ಜಾಗ ಬಿಡಲು ಇದು ದೊಡ್ಡ ಹೊಟೇಲ್ ಅಲ್ಲ ಎಂಬುದು ಅರ್ಥವಾಗುತ್ತದೆ. ಆದರೆ ಎಲ್ಲಿಯೋ ಆಟೋ ನಿಲ್ಲಿಸಿ ನಾವು ಕ್ಯಾಂಟೀನ್ ಗೆ ಊಟಕ್ಕೆ ಬರಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ರಾಜೇಶ್.
ರಾಜೇಶ್ ರಂತೆ ಹಲವರು ಇಂದಿರಾ ಕ್ಯಾಂಟೀನ್ ಗೆ ಬದಲು ರಸ್ತೆ ಬದಿಯ ತಳ್ಳುವ ಗಾಡಿಯ ಊಟ-ತಿಂಡಿಯನ್ನು ನೆಚ್ಚಿಕೊಂಡಿರುತ್ತಾರೆ.
''ನಾವು ಪ್ರತಿದಿನ ಊಟ ಮಾಡುವುದಿಲ್ಲ. ಕೆಲವು ದಿನ ಮಾತ್ರ ಅನ್ನ ತಿನ್ನುತ್ತೇವೆ. ಮಧ್ಯಾಹ್ನದ ಊಟಕ್ಕೆ ರಾಗಮುದ್ದೆ ಇಲ್ಲದಿದ್ದರೆ ಊಟ ಪೂರ್ಣ ಅನ್ನಿಸುವುದಿಲ್ಲ. ನಾನು ಇಲ್ಲಿಗೆ ಮುದ್ದೆ-ಉಪ್ಸಾರು ತಿನ್ನಲೆಂದೇ ಬರುತ್ತೇನೆ. ಇದಕ್ಕೆ 15 ರೂಪಾಯಿ. ಮುದ್ದೆ ತಿಂದರೆ ಮತ್ತೆ ಕಡಿಮೆಯೆಂದರೂ 5-6 ಗಂಟೆ ಹಸಿವಾಗುವುದಿಲ್ಲ ಎನ್ನುತ್ತಾರೆ ಕ್ಯಾಬ್ ಚಾಲಕ ಮಹದೇವ್.
ಬಸವನಗುಡಿಯ ರಾಮಕೃಷ್ಣ ಆಶ್ರಮ ಹತ್ತಿರ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಜಯಲಕ್ಷ್ಮಿ ಮತ್ತು ಉಮೇಶ್ ಅವರ ಬಳಿ ಪ್ರತಿದಿನ 80ರಿಂದ 100 ಮಂದಿ ಊಟಕ್ಕೆ ಬರುತ್ತಾರಂತೆ. ನಾವು ಮುದ್ದೆ-ಉಪ್ಸಾರಿಗೆ 15 ರೂಪಾಯಿ, ಅನ್ನ-ಸಾಂಬಾರ್ ಗೆ 25ರೂಪಾಯಿ, ವಡದ ಜೊತೆಗೆ 30ರೂಪಾಯಿ ತೆಗೆದುಕೊಳ್ಳುತ್ತೇವೆ. ಅನ್ನ-ಸಾಂಬಾರು ಗ್ರಾಹಕರು ಕೇಳಿದಷ್ಟು ನೀಡುತ್ತೇವೆ ಎನ್ನುತ್ತಾರೆ.
ಕಳೆದ ಏಳು ವರ್ಷಗಳಿಂದ ಈ ವ್ಯಾಪಾರದಲ್ಲಿ ತೊಡಗಿರುವ ಇವರು, ಇಂದಿರಾ ಕ್ಯಾಂಟೀನ್ ನಿಂದ ತಮ್ಮ ವ್ಯಾಪಾರಕ್ಕೇನು ತೊಂದರೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.