ಬೆಂಗಳೂರು: ಬೆಂಗಳೂರಿಗರ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಸಂಚಾರ ಕೊನೆಗೂ ಶುಕ್ರವಾರದಿಂದ ಆರಂಭಗೊಂಡಿದ್ದು, ನಗರದ ವೈಟ್ ಫೀಲ್ಡ್ ನಿಂದ ಬೈಯಪ್ಪನ ಹಳ್ಳಿ ನಿಲ್ದಾಣದವರೆಗೆ ಸಂಚರಿಸುವ ಡೆಮು ರೈಲಿಗೆ ಶುಕ್ರವಾರ ಚಾಲನೆ ದೊರೆಯಿತು.
"ನಮ್ಮ ಮೆಟ್ರೋ' ಕಾಮಗಾರಿ ಹಿನ್ನೆಲೆಯಲ್ಲಿ ಉಂಟಾಗಿರುವ ಸಂಚಾರದಟ್ಟಣೆ ಸಮಸ್ಯೆ ನಿವಾರಣೆಗಾಗಿ ವೈಟ್ ಫೀಲ್ಡ್‌ನಿಂದ ನಗರಕ್ಕೆ ವಿಶೇಷ ರೈಲು ಸೇವೆಗಾಗಿ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಡೆಮು ರೈಲು ಸೇವೆಗೆ ಚಾಲನೆ ನೀಡಲಾಯಿತು. ಅತ್ತ ಹುಬ್ಬಳ್ಳಿಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಹುಬ್ಬಳ್ಳಿಯಲ್ಲಿ ವೀಡಿಯೊ ಕಾನ್ಫರೆನ್ಸ್ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಂತೆ, ಇತ್ತ ಬೈಯಪ್ಪನಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್, ಸಂಸದರಾದ ಪಿ.ಸಿ. ಮೋಹನ್, ಪ್ರೊ.ಎಂ.ವಿ. ರಾಜೀವ್‌ಗೌಡ, ಶಾಸಕ ಬೈರತಿ ಬಸವರಾಜು, "ಡೆಮು' (ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್) ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಡೆಮು ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಅವರು, ಹೊಸೂರು-ಬೈಯಪ್ಪನಹಳ್ಳಿ ಮತ್ತು ಯಶವಂತಪುರ-ಬೈಯಪ್ಪನಹಳ್ಳಿ-ಚನ್ನಸಂದ್ರ ನಡುವೆ ಕೂಡ ಇದೇ ಮಾದರಿಯಲ್ಲಿ ರೈಲು ಸೇವೆ ಆರಂಭಿಸುವ ಅವಶ್ಯಕತೆ ಇದೆ. ಇದರಿಂದ ಮೊದಲ ಹಂತದ ಸಬ್ ಅರ್ಬನ್ ಸೇವೆ ನಗರದ ನಾಗರಿಕರಿಗೆ ಸಿಕ್ಕಂತಾಗುತ್ತದೆ ಎಂದು ಹೇಳಿದರು. ಇದೇ ವೇಳೆ 54 ಕಿ.ಮೀ. ಉದ್ದದ ಹೊಸೂರು-ಬೈಯಪ್ಪನಹಳ್ಳಿ ಮಾರ್ಗದ ಜೋಡಿ ಹಳಿಗಳ ನಿರ್ಮಾಣ, ವಿದ್ಯುದ್ದೀಕರಣ ಮತ್ತು ಅಟೋಮ್ಯಾಟಿಕ್ ಸಿಗ್ನಲ್ ಗಳ ಅಳವಡಿಕೆಗೆ ಸಂಬಂಧಿಸಿದಂತೆ "ಸಮಗ್ರ ಯೋಜನಾ ವರದಿ' (ಡಿಪಿಆರ್) ಪೂರ್ಣಗೊಂಡಿದ್ದು, ವರದಿಯನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಸಬ್‌ಅರ್ಬನ್ ರೈಲು ನಿರ್ವಹಣಾ ಕಾರ್ಯಗಳಿಗೆ 40 ಎಕರೆ ಭೂಮಿಯ ಅವಶ್ಯಕತೆ ಇದ್ದು, ಇದು ಬಾಣಸವಾಡಿಯ ಎನ್‌ಜಿಇಎಫ್ ಬಳಿ ಲಭ್ಯವಿದೆ. ಹೀಗಾಗಿ ಈ ಭೂಮಿ ಕಲ್ಪಿಸಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕು ಎಂದು ಅನಂತ್ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದರು. ಮುಂಬೈ ಮಾದರಿಯಲ್ಲಿ ಸಬ್‌ಅರ್ಬನ್ ರೈಲ್ವೆ ಜಾಲ ವಿಸ್ತರಿಸಲು "ಬಿ-ರೈಡ್' (ಬೆಂಗಳೂರು ರೈಲ್ವೆ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್) ವಿಶೇಷ ಉದ್ದೇಶಕ್ಕಾಗಿ ನಿಗಮ ಸ್ಥಾಪಿಸಬೇಕು. ಅದರಡಿ ಯೋಜನೆ ಕೈಗೆತ್ತಿಕೊಳ್ಳಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆ ಇರಬೇಕು. ಇದಕ್ಕೆ ಕೇಂದ್ರದ ಇನ್ನಷ್ಟು ಅನುದಾನ, ಪ್ರೋತ್ಸಾಹದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರೈಲ್ವೆ ಸಚಿವರೊಂದಿಗೆ ಚರ್ಚಿಸಲು ಸಿದ್ಧ ಎಂದರು. ಕೆ.ಜೆ. ಜಾರ್ಜ್ ಮಾತನಾಡಿ, ಸಬ್‌ಅರ್ಬನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ರೂಪಿಸಿರುವ ನೀತಿ ಸಮಾಧಾನಕರವಾಗಿಲ್ಲ. ದೆಹಲಿ, ಮುಂಬೈನಲ್ಲಿ ಕೇಂದ್ರ ಸರ್ಕಾರವೇ ಸಬ್‌ಅರ್ಬನ್ ಜಾರಿಗೊಳಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ರಾಜ್ಯದ ಮೇಲೆ ಹೊರೆ ಹಾಕುತ್ತಿರುವುದು ಸರಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡೆಮು ರೈಲಿಗೆ ಪ್ರಯಾಣಿಕರ ಸಂತಸ
ಇನ್ನು ಕಳೆದ ಹಲವು ವರ್ಷಗಳಿಂದ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬೇಕು ಎಂಬ ಬೇಡಿಕೆ ಇದೀಗ ಫಲ ನೀಡಿದ್ದು, ವೈಟ್ ಫೀಲ್ಡ್ ನಿಂದ ಬೈಯಪ್ಪನ ಹಳ್ಳಿಗೆ ಸಂಚರಿಸುವ ಡೈಮು ರೈಲು ಸಂಚಾರದಿಂದ ಈ ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಡೆಮು ರೈಲುಬೆಳಗ್ಗೆ ಮತ್ತು ಸಂಜೆ ಮಾತ್ರ ಸಂಚರಿಸಲಿದ್ದು, ಇನ್ನುಷ್ಟು ರೈಲುಗಳಿಗೆ ಇಲ್ಲಿನ ಪ್ರಯಾಣಿಕರು ಆಗ್ರಹಿಸಿದ್ದಾರೆ. ಅಂತೆಯೇ ಬೆಂಗಳೂರಿನ ವಿವಿಧ ಪ್ರದೇಶಗಳಿಗೂ ಸಬ್ ಅರ್ಬನ್ ರೈಲು ಸಂಚಾರ ವಿಸ್ತರಿಸುವಂತೆ ಪ್ರಯಾಣಿಕರು ಆಗ್ರಸಿಹಿಸಿದ್ದಾರೆ.
ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದ ಸಂಸದ ಪಿ.ಸಿ. ಮೋಹನ್ ಅವರು, ಬೆಳಿಗ್ಗೆ ಬೈಯಪ್ಪನಹಳ್ಳಿಯಿಂದ ಹೊರಡುವ ರೈಲು, ಸಂಜೆ ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿಗೆ ವಾಪಸ್ ಆಗುತ್ತದೆ. ಕೊನೆಪಕ್ಷ ಇದು ಎರಡು-ಮೂರು ಬಾರಿಯಾದರೂ ಹೋಗಿ-ಬರುವಂತಾಗಬೇಕು ಎಂದು ಒತ್ತಾಯಿಸಿದರು.