ಬೆಂಗಳೂರು: ಮಲಿನಗೊಂಡಿರುವ ಬೆಲ್ಲಂಡೂರು ಕೆರೆಯ ಸ್ವಚ್ಛತಾ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ರಾಜ್ಯ ಸರ್ಕಾರವನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ಜಿಟಿ) ತರಾಟೆಗೆ ತೆಗೆದುಕೊಂಡಿದೆ.
ಮಳೆಯಿಂದಾಗಿ ಕೆರೆಯಿಂದ ಅವ್ಯಾಹತವಾಗಿ ನೊರೆ ಉಕ್ಕಿ ಹರಿಯುತ್ತಿದ್ದು ಈ ಬಗ್ಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ ಬೆಂಗಳೂರು ಎಲ್ಲಾ ನಾಗರಿಕ ಸಂಸ್ಥೆಗೆ ಸ್ವಚ್ಛತಾ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸೂಚಿಸಿದೆ.
ಕೆರೆಯಲ್ಲಿ ಬೆಳೆದಿರುವ ಸಸಿ ತೆಗೆಯಬೇಕು ಮತ್ತು ಕೆರೆಗೆ ಬಿಡಲಾಗುತ್ತಿರುವ ಮುನ್ಸಿಪಲ್ ಘನ ತ್ಯಾಜ್ಯ, ವಾಣಿಜ್ಯ, ದೇಶೀಯ ಮತ್ತು ಇತರ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಈ ಹಿಂದೆ ಎನ್ಜಿಟಿ ಹೇಳಿತ್ತು. ಜತೆಗೆ ಕೆರೆಯ ಸುತ್ತಮುತ್ತಲಿನ ಎಲ್ಲಾ ವಸತಿ ಸಂಕೀರ್ಣಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಕೊಳಚೆನೀರಿನ ಸಂಸ್ಕರಣಾ ಘಟಕಗಳ(ಸಾಮರ್ಥ್ಯ, ತಂತ್ರಜ್ಞಾನ ಮತ್ತು ಮಾನದಂಡಗಳನ್ನು) ನವೀಕರಣದ ವಿವರಗಳನ್ನು ಕೋರಿತ್ತು. ಈ ಎಲ್ಲ ಕಾರ್ಯಗಳನ್ನು ಖುದ್ದು ಪರಿಶೀಲಿಸುವಂತೆ ಹಿರಿಯ ಅಧಿಕಾರಿಗೆ ಎನ್ಜಿಟಿ ಸೂಚಿಸಿದೆ. ಅಲ್ಲದೆ ಸೆಪ್ಟೆಂಬರ್ 8ರಂದು ನಡೆಯಲಿರುವ ವಿಚಾರಣೆಗೂ ಮುನ್ನ ವರದಿ ನೀಡುವಂತೆ ಸೂಚಿಸಿದೆ.
ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೊಂಧಿ ಅವರು ಮುನ್ಸಿಪಲ್ ಘನ ತ್ಯಾಜ್ಯ, ವಾಣಿಜ್ಯ, ದೇಶೀಯ ಮತ್ತು ಇತರ ತ್ಯಾಜ್ಯಗಳನ್ನು ಕೆರೆಯಿಂದ ಹೊರಹಾಕಿರುವುದಾಗಿ ವರದಿ ನೀಡಿದ್ದು ಇದಕ್ಕೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಿಇಒ ಅಸಮ್ಮತಿ ಸೂಚಿಸಿದ್ದಾರೆ.