ಬೆಂಗಳೂರು: ಅರ್ಕಾವತಿ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ನ್ಯಾ.ಹೆಚ್ಎಸ್ ಕೆಂಪಣ್ಣ ಆಯೋಗ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿದೆ.
ಕರ್ನಾಟಕ ಮುಖ್ಯಕಾರ್ಯದರ್ಶಿ ಸುಭಾಷ್ ಕುಂಟಿಯಾ ಅವರಿಗೆ ಕೆಂಪಣ್ಣ ಆಯೋಗ ವರದಿ ಸಲ್ಲಿಸಿದ್ದು, ವರದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿದೆ. ಮೂಲಗಳ ಪ್ರಕಾರ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳ ಲೋಪವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಕಾವತಿ ಬಡಾವಣೆಯ ಅಭಿವೃದ್ಧಿಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ದೂರುಗಳನ್ನು ಪರಿಶೀಲನೆಯ ಕೆಲಸವನ್ನು ಪೂರ್ಣಗೊಳಿಸಿದ್ದು, ವರದಿಯನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಸುಮಾರು 1,861 ಪುಟಗಳ ವರದಿಯಲ್ಲಿ ಆಯೋಗ ಹೇಳಿದೆ.
ಸಿಎಂ ಸಿದ್ದರಾಮಯ್ಯ 541 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿ ತನಿಖೆಗೆ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ 2014 ರ ಆಗಸ್ಟ್ ನಲ್ಲಿ ಕೆಂಪಣ್ಣ ಆಯೋಗವನ್ನು ರಚಿಸಲಾಗಿತ್ತು.