ಬೆಂಗಳೂರು: ಎರಡು ವರ್ಷಗಳ ನಂತರ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ರಕ್ಷಣೆಗೆ ಧಾವಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮಧ್ಯಪ್ರವೇಶಿಸಿ ವಿವಿ ಮಾನ್ಯತೆ ಪುನರ್ ನವೀಕರಣ ಗೊಳಿಸುವಂತೆ ಮನವಿ ಮಾಡಿದ್ದಾರೆ. ಕೆಎಸ್ ಒಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯುಜಿಸಿ ಧನಾತ್ಮಕ ನಿರ್ದಾರ ಕೈಗೊಳ್ಳುವಂತೆ ಪತ್ರದಲ್ಲಿ ಕೋರಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ನಾನು ಈ ಪತ್ರ ಬರೆಯುತ್ತಿದ್ದೇನೆ, 2013-14 ಶೈಕ್ಷಣಿಕ ವರ್ಷದಿಂದಲೇ ವಿವಿಯ ಮಾನ್ಯತೆ ರದ್ಧು ಪಡಿಸಿ 2015ರ ಜೂನ್ 16 ರಂದು ಸಾರ್ವಜನಿಕ ನೊಟೀಸ್ ಹೊರಡಿಸಿತ್ತು. ಈ ಸಂಬಂಧ ತಜ್ಞರ ಸಮಿತಿ ರಚಿಸಿದ್ದ ಯುಜಿಸಿ, ಕೆಎಸ್ಒಯು ದೂರಿನ ಬಗ್ಗೆ ಅಧ್ಯಯನ ನಡೆಸುವಂತೆ ಹೇಳಿತ್ತು, ಅದರಂತೆ ಸಮಿತಿ ಅಧ್ಯಯನ ನಡೆಸಿ ತನ್ನ ಶಿಫಾರಸುಗಳನ್ನು ಯುಜಿಸಿಗೆ ವರದಿ ಮಾಡಿತ್ತು.
ವಿವಿಧ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳು ವಿವಿಗೆ ಸೇರಿದ್ದಾರೆ. ವಿಶೇಷವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳಿಗೆ ಸೇರಿದ್ದಾರೆ. ಆದರೆ ಯುಜಿಸಿ ವಿವಿ ಮಾನ್ಯತೆ ರದ್ಧುಗೊಳಿಸಿರುವುದರಿಂದ ಈ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವ ಆತಂಕದಲ್ಲಿದ್ದು, ಅವರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ, ಸತತವಾಗಿ ವಿದ್ಯಾರ್ಥಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಹೀಗಾಗಿ ಪತ್ರದ ಮುಖೇನ ಮನವಿ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ.
ಕೇಂದ್ರ ಉನ್ನತ ಶಿಕ್ಷಣ ಕಾರ್ಯಾಲಯದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯ ನಂತರ ಯುಜಿಸಿಗೆ ವಿವಿಯ ಮಾನ್ಯತೆ ರದ್ದು ಸಂಬಂಧ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಯುಜಿಸಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಹೀಗಾಗಿ ಈ ವಿಷಯದಲ್ಲಿ ತಾವು ಖುದ್ದಾಗಿ ಆಸಕ್ತಿ ವಹಿಸ ಸಮಸ್ಯೆ ಬಗೆಹರಿಸಬೇಕೆಂದು ಸಿದ್ದರಾಮಯ್ಯ ಕೋರಿದ್ದಾರೆ.