ಬೆಂಗಳೂರು: ಕೋಲಾರದ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಪ್ರಕರಣ ಸಂಬಂಧ ಕೇಸ್ ಶೀಟ್ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಕೇಳಿದೆ.
ಪ್ರಕರಣ ಸಂಬಂಧ ಸುಮೊಟು ಕೇಸು ದಾಖಲಿಸಿಕೊಂಡಿರುವ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಪ್ರತಿಯೊಂದು ಕೇಸ್ ನ ವಯಕ್ತಿಕ ವಿವರಣೆ ನೀಡುವಂತೆ, ಆಸ್ಪತ್ರೆಯ ಆಡಳಿತ ವರ್ಗಕ್ಕೆ ಸೂಚಿಸಿದೆ.
ವೈದ್ಯಕೀಯ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಮಕ್ಕಳ ಸಾವಿನ ಬಗ್ಗೆ ಮಾಹಿತಿ ನೀಡಿರುವ ವೈದ್ಯರು ಕಡಿಮೆ ತೂಕ ಇದ್ದ ಕಾರಣ ಶಿಶುಗಳು ಸಾವನ್ನಪ್ಪಿವೆ ಜೊತೆಗೆ ಆ ಮಕ್ಕಳಿಗೆ ವೈದ್ಯಕೀಯ ತೊಂದರೆಗಳಿದ್ದವು ಎಂದು ಹೇಳಿದ್ದಾರೆ.
ಕಳೆದ 30 ದಿನಗಳಲ್ಲಿ ಸುಮಾರು 30 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಈ ಆರೋಪವನ್ನ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.
ಆಯೋಗ ಆಸ್ಪತ್ರೆಗೆ ಭೇಟಿ ನೀಡಿದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಕರೆಂಟ್ ಇರಲಿಲ್ಲ, ಕತ್ತಲೆಯಲ್ಲಿಯೇ ಪರಿಶೀಲನೆ ನಡೆಸಬೇಕಾಯಿತು. ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ ಕೂಡ ಅದೂ ಒವರ್ ಹೀಟ್ ಆಗಿದೆ ಎಂಬ ಕಾರಣಕ್ಕೆ ಅದನ್ನು ಆಫ್ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ಆಸ್ಪತ್ರೆಗೆ ಸತತ 24 ಗಂಟೆಗಳೂ ಕರೆಂಟ್ ಸರಬರಾಜು ಮಾಡಬೇಕು ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೈದ್ಯರು ಈ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲ ಎಂದು ಹೇಳಿದ್ದಾರೆ. ಮೂರನೇ ದರ್ಜೆಯ ಆಸ್ಪತ್ರೆಯಲ್ಲಿ ಮಾತ್ರ ಆ ಸೌಲಭ್ಯವಿರುತ್ತದೆ, ಆದರೆ ಜಿಲ್ಲಾಸ್ಪತ್ರೆಯೆಂದು ಪರಿಗಣಿಸಲ್ಪಟ್ಟಿರುವ ಈ ಆಸ್ಪತ್ರೆಯಲ್ಲಿ ಇನ್ನೂ ಆ ಸೌಲಭ್ಯ ನೀಡಿಲ್ಲ, ವೆಂಟಿಲೇಟರ್ ಅತ್ಯವಶ್ಯಕವಾಗಿ ಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.