ನಿನ್ನೆ ಬೆಂಗಳೂರಿನಲ್ಲಿ ಗ್ರಾಮೀಣ ಭಾರತದ ಡಿಜಿಟಲೀಕರಣ ಕಾರ್ಯಕ್ರಮದ ಅಂಗವಾಗಿ ವಿಜಯ ಬ್ಯಾಂಕ್‍ನ 100ನೇ ಗ್ರಾಮೀಣ ಶಾಖೆ ಉದ್ಘಾಟಿಸಿದ ಅರುಣ್ ಜೇಟ್ಲಿ
ಬೆಂಗಳೂರು: ತ್ವರಿತವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದಂತಹ ದೇಶಗಳಲ್ಲಿ ನಗದು ಆಧಾರಿತ ವಹಿವಾಟು ವ್ಯವಸ್ಥೆಗೆ ಶಾಪದಂತೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅವರು ನಿನ್ನೆ ಬೆಂಗಳೂರಿನಲ್ಲಿ, ಗ್ರಾಮೀಣ ಭಾರತದ ಡಿಜಿಟಲೀಕರಣ ಕಾರ್ಯಕ್ರಮದ ಅಂಗವಾಗಿ, ವಿಜಯ ಬ್ಯಾಂಕ್‍ನ 100ನೇ ಗ್ರಾಮೀಣ ಶಾಖೆ,100ನೇ ಡಿಜಿಟಲ್ ಗ್ರಾಮ ಹಾಗೂ 100ನೇ ಎಟಿಎಂಗೆ ಚಾಲನೆ ನೀಡಿ ಮಾತನಾಡಿದರು.
ಭಾರತ ಅತಿಹೆಚ್ಚು ನಗದು ವ್ಯವಸ್ಥೆ ಹೊಂದಿರುವ ದೇಶವಾಗಿದ್ದು, ನೋಟುಗಳ ಮುದ್ರಣ ವ್ಯವಸ್ಥೆ ಹಾಗೂ ನಗದು ಪೂರೈಕೆಗೆ ಹೆಚ್ಚಿನ ಚ್ಚವಾಗುತ್ತದೆ. ಭಯೋತ್ಪಾದನೆ, ಆತಂಕವಾದ ಕೂಡ ನಗದು ವ್ಯವಸ್ಥೆಯ ಆಧಾರದ ಮೇಲೆ ನಡೆಯುತ್ತದೆ. ಇದು ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಡಿಜಿಟಲ್ ಆರ್ಥಿಕತೆಯತ್ತ ದೇಶ ಹೊರಳಬೇಕಾಗಿದೆ. ಜನ್‍ಧನ್ ಯೋಜನೆಯನ್ನು ಇದೇ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಅತ್ಯಂತ ಹೆಚ್ಚು ಯಶಸ್ಸು ದೊರೆತಿದೆ ಎಂದರು.
ಬ್ಯಾಂಕ್‍ಗಳು ಹೆಚ್ಚಿನ ಶಾಖೆ ಮತ್ತು ಎಟಿಎಂಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರ ನಿರ್ಮಾಣದ ಬದ್ದತೆಯಲ್ಲಿ ತೊಡಗಿಸಿಕೊಂಡಿವೆ. ಡಿಜಿಟಲ್ ವಹಿವಾಟು ವೆಚ್ಚ ಕಡಿಮೆ ಮಾಡಲು ಮತ್ತು ಡಿಜಿಟಲ್ ಹಣ ವರ್ಗಾವಣೆಯತ್ತ ಜನರನ್ನು ಆಕರ್ಷಿಸಲು ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿದೆ. ಎಂದು ಅರುಣ್ ಜೇಟ್ಲಿ ಹೇಳಿದರು.
ನಂತರ ಅವರು, ಎಚ್ ಎಎಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ಎಲ್‍ಸಿಎಚ್ ಹಾಗೂ ಹಾಕ್ ಐ ಯುದ್ಧ ವಿಮಾನಗಳನ್ನು ಲೋಕಾರ್ಪಣೆ ಮಾಡಿದರು.