ತಿರಂಗ ಯಾತ್ರೆಯಲ್ಲಿ ಕೇಂದ್ರ ಸಚಿವರು
ಬೆಂಗಳೂರು: ಕ್ವಿಂಟ್ ಇಂಡಿಯಾ ಚಳವಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ಹಾಗೂ ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿವಿ ಸದಾನಂದಗೌಡ ಅವರು ಮಂಗಳವಾರ ಬೆಂಗಳೂರಿನಲ್ಲಿ ತಿರಂಗ ಯಾತ್ರೆ ಹಾಗೂ ಸಂಕಲ್ಪ ಸಿದ್ಧಿ ಯಾತ್ರೆಗೆ ಚಾಲನೆ ನೀಡಿದರು.
ಇಬ್ಬರು ಕೇಂದ್ರ ಸಚಿವರು ಇಂದು ಕಾರ್ಮಿಕ ಇಲಾಖೆಯು ಕಾರ್ಮಿಕ ಭವಿಷ್ಯನಿಧಿ ಸಂಘದ ಸದಸ್ಯರೊಂದಿಗೆ ಐಟಿಐ ಕ್ರಿಕೆಟ್ ಗ್ರೌಂಡ್ ನಿಂದ ಇಂಡಿಯನ್ ಟೆಲೆಫೋನ್ ಇಂಡಸ್ಟ್ರೀವರೆಗೆ ತಿರಂಗ ಯಾತ್ರೆ ನಡೆಸಿದರು. ಬಳಿಕ ಮಾತನಾಡಿದ ದತ್ತಾತ್ರೆಯ ಅವರು, ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಕೂಗಿದ್ದರು. ಇಂದು ನಾವು ಭ್ರಷ್ಟಾಚಾರ, ಜಾತೀಯತೆ, ಕೋಮುವಾದವನ್ನು ಭಾರತ ಬಿಟ್ಟು ತೊಲಗಿಸುವುದಕ್ಕಾಗಿ ಸಂಕಲ್ಪ ಮಾಡಬೇಕಿದೆ ಎಂದರು.
ಪ್ರತಿ ನೌಕರರು ನಿವೃತ್ತಿ ಹೊಂದುವ ವೇಳೆ ಸ್ವಂತ ಮನೆ ಹೊಂದಿರಬೇಕೆಂಬ ಸಂಕಲ್ಪವೊಂದಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಕಾರ್ಯೋನ್ಮುಖವಾಗಿದೆ. 2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸಲಾಗುವುದು ಎಂದರು.
ಕರ್ನಾಟಕದಲ್ಲಿ 13 ಲಕ್ಷ ಹೊಸಸದಸ್ಯರನ್ನು ನೊಂದಾಯಿಸಿದ್ದು, ಇಡೀ ದೇಶದಲ್ಲಿ 1 ಕೋಟಿ ಸದಸ್ಯರನ್ನು ನೊಂದಾಯಿಸಿದ್ದೇವೆ. ಕರ್ನಾಟಕದಲ್ಲಿ 17 ಪ್ರಾದೇಶಿಕ ಕಚೇರಿಗಳಿವೆ. 5 ಕಚೇರಿಗಳು ಸ್ವಂತ ಕಟ್ಟಡಗಳನ್ನು ಹೊಂದಿದ್ದು, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಶೀಘ್ರದಲ್ಲೇ ಕಚೇರಿಗಳನ್ನು ಪ್ರಾರಂಭಿಸಲಾಗುವು ಎಂದು ಕೇಂದ್ರ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ ಅವರು, ಭ್ರಷ್ಟಾಚಾರ ತೊಲಗಿಸುವುದು, ಜಾತೀವಾದ, ಕೋಮುವಾದ, ಭಯೋತ್ಪಾದನೆಗಳಂತಹ ಪಿಡುಗುಗಳನ್ನು ತೊಲಗಿಸಲು ಬದ್ಧವಾಗುವಂತೆ ದೇಶದ ಪ್ರಜೆಗಳಿಗೆ ಕರೆ ನೀಡಿದರು.