ತುಮಕೂರು: ಬಿಎಸ್ ವೈ ಬೆಂಬಲಿಗರಿಂದ ಟ್ವಿ ವರದಿಗಾರನ ಮೇಲೆ ಹಲ್ಲೆ, ದೂರು ದಾಖಲು
ತುಮಕೂರು: ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ಎಸ್. ಯಡಿಯೂರಪ್ಪ ಅವರ ನಿಷ್ಠರಾದ ಇಬ್ಬರು ಬಿಜೆಪಿ ನಾಯಕರು ಖಾಸಗಿ ಟಿವಿ ಚಾನಲ್ ವರದಿಗಾರನ ಮೇಲೆ ಹಲ್ಲೆ ನಡೆಸಿದ್ದಾರೆ.
ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಬಿ.ಎಸ್.ನಾಗೇಶ್ ಅಲಿಯಾಸ್ ಬಾವಿಕಟ್ಟೆ ನಾಗಣ್ಣ ಮತ್ತು ಅವರ ಆಪ್ತ ರವಿಶಂಕರ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೇರಿ ಟಿವಿ ವರದಿಗಾರ ವಾಗೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಉಡುಪಿ ಹೋಟೆಲ್‌ನಲ್ಲಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಜಿ. ಬಿ. ಜ್ಯೋತಿಗಣೇಶ್ ಅವರೊಂದಿಗಿನ ಸಂದರ್ಶನ ಮುಗಿದ ಕೆಲವೇ ಸಮಯದಲ್ಲಿ ಘಟನೆ ನಡೆದಿದೆ.
"ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಬಾವಿಕಟ್ಟೆ ನಾಗಣ್ಣ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿಶಂಕರ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಬಿಟಿವಿ ನ್ಯೂಸ್ ವರದಿಗಾರ ವಾಗೀಶ್ ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ಬಿ.ಜಿ.ಜ್ಯೋತಿಗಣೇಶ್ ಅವರ ಪತ್ರಿಕಾಗೋಷ್ಠಿ ಗೆ ತೆರಳಿದ್ದ ನನ್ನ ಮೇಲೆ ಹಲ್ಲೆ ನಡೆದಿದೆ. 'ಇಲ್ಲ ಸಲ್ಲದ ವರದಿ ಪ್ರಸಾರ ಮಾಡುತ್ತೀಯೆ' ಎಂದು ನಾಗಣ್ಣ ಹಾಗೂ ರವಿಶಂಕರ್ ನನಗೆ ಹೆದರಿಸಿ, ಜೀವಬೆದರಿಕೆ ಹಾಕಿದ್ದಾರೆ" ಎಂದು ವಾಗೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ "ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ "ಎಂದರು.