ಬೆಂಗಳೂರು: ದೇವರ ಹೆಸರಲ್ಲಿ ಶಾಂತಿ ಭಂಗ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಬಿಜೆಪಿ ನಾಯಕರು ರಾಮ, ಹನುಮ, ದತ್ತ ಪೀಠದ ಹೆಸರಲ್ಲಿ ಭಕ್ತಿಗಿಂತ ರಾಜಕೀಯ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹನುಮ, ಶ್ರೀರಾಮ, ದತ್ತ ಪೀಠದ ಬಗ್ಗೆ ಬಿಜೆಪಿಯವರಿಗಿಂತ ಕಾಂಗ್ರೆಸ್ ನಾಯಕರಿಗೆ ಹೆಚ್ಚಿನ ಭಕ್ತಿ ಇದೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಳ್ಳಲು ಇಲ್ಲವೆ ಹದಗೆಡಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ ಸೇರಿದಂತೆ, ಅನೇಕ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇವರಿಗೆ ಕಾನೂನು ಅರಿವಿನ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದು ಒಳಿತು ಎಂದರು.
ಇದೇ ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, ಶ್ರೀರಾಮನ ಹೆಸರಿನಲ್ಲಿ ಇಟ್ಟಿಗೆ ಸಂಗ್ರಹಿಸಿದ ಬಿಜೆಪಿ ನಾಯಕರು ಆ ಇಟ್ಟಿಗೆಗಳು ಎಲ್ಲಿ ಹೋದವು ಎನ್ನುವುದು ಇದುವರೆಗೂ ತಿಳಿದಿಲ್ಲ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯದ್ದೇ ಅಧಿಕಾರವಿದೆ. ರಾಮಮಂದಿರ ಕಟ್ಟಲು ಅವರನ್ನು ತಡೆಹಿಡಿದವರು ಯಾರು? ಎಂದು ಪ್ರಶ್ನಿಸಿದರು. ಅಲ್ಲದೆ ಇನ್ನು 30 – 40 ವರ್ಷಗಳಾದರೂ ಬಿಜೆಪಿ ಪಕ್ಷ ರಾಮಮಂದಿರ ಕಟ್ಟುವುದಿಲ್ಲ ಎಂದು ಹೇಳಿದರು.