ರಾಜ್ಯ

ಪತ್ರಕರ್ತರಾದ ರವಿ ಬೆಳಗೆರೆ, ಅನಿಲ್ ರಾಜ್ ಜೈಲು ಶಿಕ್ಷೆಗೆ ಕರ್ನಾಟಕ ಹೈಕೋರ್ಟ್ ತಡೆ

Lingaraj Badiger
ಬೆಂಗಳೂರು: 'ಹಾಯ್‌ ಬೆಂಗಳೂರು' ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಮತ್ತು ಯಲಹಂಕ ವಾಯ್ಸ್‌ ಸಂಪಾದಕ ಅನಿಲ್ ರಾಜ್ ಅವರಿಗೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿ ನೀಡಿರುವ ಒಂದು ವರ್ಷ ಜೈಲು ಶಿಕ್ಷೆಗೆ ಬುಧವಾರ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಹಕ್ಕುಭಾದ್ಯತಾ ಸಮಿತಿಯ ಆದೇಶ ರದ್ದುಗೊಳಿಸುವಂತೆ ಕೋರಿ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ ಅವರು, ಶಿಕ್ಷೆಗೆ ತಡೆ ನೀಡಿ, ಅಂತಿಮ ಆದೇಶ ನೀಡುವವರೆಗೂ ಇಬ್ಬರು ಪತ್ರಕರ್ತರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ತಮ್ಮ ವಿರುದ್ಧದ ಆರೋಪಗಳು ಶಾಸಕರ ಹಕ್ಕು ಚ್ಯುತಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೈಕೋರ್ಟ್‌ ನಿರ್ದೇಶನದಂತೆ ಮತ್ತೂಮ್ಮೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ಸಮಿತಿ ವಾದ ಮಂಡನೆಗೆ ಅವಕಾಶ ನೀಡಿಲ್ಲ. ಇದೀಗ ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಹೀಗಾಗಿ ಹಕ್ಕುಭಾದ್ಯತಾ ಸಮಿತಿಯ ಆದೇಶ ರದ್ದುಗೊಳಿಸುವಂತೆ ಪತ್ರಕರ್ತರು ಕೋರ್ಟ್ ಗೆ ಮನವಿ ಮಾಡಿದ್ದರು.
ರವಿ ಬೆಳಗರೆ ಮತ್ತು ಯಲಹಂಕ ವಾಯ್ಸ್‌ ಪತ್ರಿಕೆಯ ಸಂಪಾದಕ ಅನಿಲ್‌ ರಾಜ್‌ ಅವರಿಗೆ ಹಕ್ಕು ಬಾಧ್ಯತಾ ಸಮಿತಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10,000 ರುಪಾಯಿ ದಂಡ ವಿಧಿಸಿತ್ತು. ಇದನ್ನು ಮರು ಪರಿಶೀಲಿಸುವಂತೆ ಪತ್ರಕರ್ತರಿಬ್ಬರೂ ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಮನವಿಯನ್ನು ಕೋಳಿವಾಡ್ ಅವರು ತಿರಸ್ಕರಿಸಿದ್ದರು.
SCROLL FOR NEXT